ಹಲಾಲ್ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ, ಅನಗತ್ಯ ವಿಚಾರಕ್ಕೆ ಸಮಾಜದಲ್ಲಿ ಅಶಾಂತಿ ಸೃಷ್ಟಿ: ಸಿದ್ದರಾಮಯ್ಯ
ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಆರಂಭಿಸಿರುವ ಹಲಾಲ್ ಕಟ್ v/s ಜಟ್ಕಾ ಕಟ್ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ನಾಯಕರು ಮೌನವಾಗಿದ್ದರು.
Published: 03rd April 2022 02:33 PM | Last Updated: 03rd April 2022 02:43 PM | A+A A-

ಸಿದ್ದರಾಮಯ್ಯ
ಬೆಂಗಳೂರು: ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಆರಂಭಿಸಿರುವ ಹಲಾಲ್ ಕಟ್ v/s ಜಟ್ಕಾ ಕಟ್ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ನಾಯಕರು ಮೌನವಾಗಿದ್ದರು.
ಬೆಲೆ ಏರಿಕೆ ಸೇರಿದಂತೆ ಯುವಜನರನ್ನು ಕಾಡುತ್ತಿರುವ ಅಂಶಗಳ ಬಗ್ಗೆ ಮಾತನಾಡದೆ ಅನಗತ್ಯವಾಗಿ ಕೆಲ ವಿಚಾರಗಳನ್ನು,ಜನರಿಗೆ ಉಪಯೋಗವಾಗದ ವಿಷಯಗಳನ್ನು ವಿವಾದವಾಗಿ ಬೆಳೆಸಲಾಗುತ್ತಿದೆ ಎಂದು ಆರೋಪಿಸಿದರು.
ಸಾವಿರಾರು ವರ್ಷಗಳಿಂದ ಹಲಾಲ್ ನಡೆದುಕೊಂಡು ಬಂದಿದೆ. ಅವರ ಪದ್ಧತಿ ಅವರದ್ದು, ನಮ್ಮ ಪದ್ಧತಿ ನಮ್ಮದು. ರಕ್ತದಿಂದ ಕೂಡಿರುವ ಮಾಂಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಅವರ ನಂಬಿಕೆ. ಅವರ ನಂಬಿಕೆಯಂತೆ ಅವರು ಬದುಕಲು ಬಿಡಿ. ನಾವೂ ಕೂಡ ಹಲಾಲ್ ಕಟ್ ಮಾಂಸ ಖರೀದಿಸಿ ತಿಂದಿಲ್ವಾ? ನಾವು ಜಾತ್ರೆಗಳಲ್ಲಿ ಮರಿ ಕಡಿಯುವುದಿಲ್ಲವಾ? ಅನಗತ್ಯ ವಿಚಾರಕ್ಕೆ ಶಾಂತಿ ಹಾಳು ಮಾಡುವ ಕೆಲಸ ಮಾಡಬೇಡಿ. ಜನಗರಿಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಿ. ಮನುಷ್ಯನ ಬದುಕಿಗೆ ಸಂಬಂಧವಿಲ್ಲದ ವಿಷಯಗಳನ್ನು ಪ್ರಸ್ತಾಪಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: ಮೈಸೂರು: ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿ
ಜನರು ಈಗ ಬೆಲೆಏರಿಕೆಯಿಂದ ಕಂಗಾಲಾಗಿದ್ದಾರೆ. ಅದನ್ನು ಮುಚ್ಚಿಹಾಕಲು ಸರ್ಕಾರಗಳು ಕೋಮು ಗಲಭೆಗೆ ಪ್ರಚೋದಿಸುತ್ತಿವೆ. ಹಿಜಾಬ್ ಪದ್ಧತಿ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳ ಸಮೀಪ ಹಿಂದೂಯೇತರರ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾಗಳನ್ನು ಹಲವೆಡೆ ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಮನುಷ್ಯತ್ವ ಇದೆಯೇ ಎಂದು ಸಿದ್ದರಾಮಯ್ಯ ಕೇಳಿದರು.
ಕೇಂದ್ರ ಸರ್ಕಾರವು ಯುಗಾದಿಗೆ ಕೇವಲ ಕಹಿ ನೀಡಿದೆ. ಸಿಹಿ ಕೊಡಲೇ ಇಲ್ಲ. 50 ಕೆಜಿ ಡಿಎಪಿ ರಸಗೊಬ್ಬರದ ಮೂಟೆ 1,350 ಆಗಿದೆ. ಡಿಎಪಿ ರಸಗೊಬ್ಬರ ಒಂದು ಕೆಜಿ ಮೇಲೆ 3 ರೂಪಾಯಿ ಹೆಚ್ಚಳವಾಗಿದೆ. ದೇಶದಲ್ಲಿ 1 ಕೋಟಿ 20 ಲಕ್ಷ ಟನ್ ಡಿಎಪಿ ಬಳಸುತ್ತಾರೆ. 3,600 ಕೋಟಿ ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಮೋದಿ, ರೈತರ ರಕ್ತ ಹೀರುತ್ತಿದ್ದಾರೆ. ತೈಲ ಕಂಪನಿಗಳು ನಮ್ಮ ಅಧೀನದಲ್ಲಿಲ್ಲ ಎನ್ನುತ್ತಾರೆ. ಆದರೆ ಚುನಾವಣೆ ಸಮಯದಲ್ಲಿ ತೈಲ ಬೆಲೆ ಏರಿಕೆಯಾಗದೆ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಹೆಚ್ಚಾಗುತ್ತದೆ ಎಂದು ದೂರಿದರು.
ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಬಕಾರಿ ಸುಂಕದಿಂದ ₹26 ಲಕ್ಷ ಕೋಟಿ ಆದಾಯ ಬಂದಿದೆ. ಡೀಸೆಲ್ ಮೇಲಿನ ಸುಂಕ ಶೇ 531, ಪೆಟ್ರೋಲ್ ಮೇಲೆ ಸುಂಕ ಶೇ 203ರಷ್ಟು ಹೆಚ್ಚಾಗಿದೆ. ಆದರೆ ಕಾರ್ಪೊರೇಟ್ ಟ್ಯಾಕ್ಸ್ ಶೇ 35ರಿಂದ 23ಕ್ಕೆ ಇಳಿಕೆಯಾಗಿದೆ. ಹಿಂದಿನ ಸರ್ಕಾರ ಸಾಲ ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ. ದೇಶದ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಬ್ಸಿಡಿಯನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 50 ಹೆಚ್ಚಾಗಿದೆ. ಎಲ್ಲರಿಗೂ ಒಂದು ಸಾವಿರ ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿಸಲು ಆಗುತ್ತದೆಯೇ? ಜನೌಷಧ ಅಂಗಡಿಗಳಲ್ಲಿ ದೊರೆಯುವ ಔಷಧಗಳ ಬೆಲೆಯನ್ನೂ ಶೇ 10ರಷ್ಟು ಹೆಚ್ಚಿಸಿದ್ದಾರೆ. ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ. ಸಾಮಾನ್ಯ ಜನರ ಜೀವನ ದುಸ್ತರವಾಗುತ್ತದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.