ನೈಸ್ ಸಂಸ್ಥೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಿದೆಯೇ ಖಚಿತಪಡಿಸಿಕೊಳ್ಳಿ: ಸರ್ಕಾರಕ್ಕೆ ದೇವೇಗೌಡ ಪತ್ರ
ನೈಸ್ ಸಂಸ್ಥೆ ಟೋಲ್ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಳ ಮಾಡಿದೆ. ನೈಸ್ ಸಂಸ್ಥೆಯು ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ. ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ.
Published: 04th April 2022 08:09 AM | Last Updated: 04th April 2022 01:41 PM | A+A A-

ಎಚ್.ಡಿ ದೇವೇಗೌಡ
ಬೆಂಗಳೂರು: ನೈಸ್ ಸಂಸ್ಥೆಯ ಅಕ್ರಮದ ವಿರುದ್ಧ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಅಕ್ರಮದ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ನೈಸ್ ಸಂಸ್ಥೆ ಟೋಲ್ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಳ ಮಾಡಿದೆ. ನೈಸ್ ಸಂಸ್ಥೆಯು ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ. ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ.ನೈಸ್ ಸಂಸ್ಥೆಗೆ ಕೊಮ್ಮನಗಟ್ಟದ ಬಳಿ ನೀಡಿರುವ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಪತ್ರ ಬರೆದಿದ್ದೇನೆ ಎಂದರು.
ವಿಧಾನ ಪರಿಷತ್ ನಲ್ಲಿ ಈ ವಿಷಯ ಚರ್ಚೆ ಆಯ್ತು.ಆದ್ರೆ ಯಾವುದೇ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ.ನಾನು ಅನೇಕ ಪತ್ರಗಳನ್ನು ಸಿಎಂ, ಸಿಎಸ್, ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಕೂಡ ಪತ್ರ ಬರೆದಿದ್ದೇನೆ ಆದರೆ ಯಾರಿಂದಲೂ ಉತ್ತರ ಬಂದಿಲ್ಲ ಎಂದರು.ಸರ್ಕಾರ ನೈಸ್ ವಿಚಾರವಾಗಿ ಕಮಿಟಿ ಮಾಡಿತ್ತು. ಆದರೆ ಕಮಿಟಿಯನ್ನ ಪದೇ ಪದೇ ಬದಲಾವಣೆ ಮಾಡುತ್ತಾ ಹೋದ್ರು. ಸಚಿವ ಮಾಧುಸ್ವಾಮಿ ಅವ್ರು ಈ ಕಂಪನಿ ವ್ಯವಹಾರಗಳು ಸರಿ ಇಲ್ಲ ಅಂತ ಹೇಳಿದ್ದಾರೆ. ಆಗ ನೈಸ್ ಸಂಸ್ಥೆಗೆ ಕೇವಲ 5 ಲಕ್ಷ ಮಾತ್ರ ಪೆನಾಲ್ಟಿ ಹಾಕಿದ್ರು ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಟೋಲ್ ದರ ಹೆಚ್ಚಳ ಮಾಡಿದೆ. ಸರ್ಕಾರದ ಎಲ್ಲ ನಿಯಮಗಳು ಮತ್ತು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ನೈಸ್ ಕಂಪನಿ ಟೋಲ್ ಸಂಗ್ರಹಿಸುತ್ತಿದೆ. ಇದರ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬರೆದಿದ್ದ ಪತ್ರದ ಒಂದು ಪ್ರತಿಯನ್ನು ಸಚಿವ ಮಾಧುಸ್ವಾಮಿ ಅವರಿಗೂ ಹಾಕಿದ್ದೆ. ಯಾವ ಮನುಷ್ಯ ನ್ಯಾಯಕ್ಕೋಸ್ಕರ ಹೋರಾಟ ಮಾಡ್ತಾನೆ ಎನ್ನುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತೇನೆ. ಸದನ ಸಮಿತಿಯು ಈ ಸಂಬಂಧ ವರದಿ ಕೊಟ್ಟಿದೆ. 2016ರಲ್ಲಿ ಟೋಲ್ ರೋಡ್ ಕೆಲಸ ಪೂರ್ಣಗೊಂಡಿಲ್ಲ. ಟೌನ್ ಶಿಪ್ ಆದ ನಂತರವೇ ಟೋಲ್ ಹಣ ಸಂಗ್ರಹಿಸಬೇಕು ಎಂಬ ಷರತ್ತು ಇದೆ ಎಂದರು. ಒಂದು ದಿನಕ್ಕೆ ನೈಸ್ ಸಂಸ್ಥೆ ಸಂಗ್ರಹಿಸುತ್ತಿರುವ ಟೋಲ್ ಹಣ ಎಷ್ಟು ಎಂದು ಯಾರಾದರೂ ನೋಡಿದ್ದಾರೆ ಎಂದು ಪ್ರಶ್ನಿಸಿದರು.
ಉತ್ತಮ ರಸ್ತೆ ನಿರ್ಮಿಸುವ ಭರವಸೆಯೊಂದಿಗೆ ಸರ್ಕಾರದ ಜಮೀನನ್ನು ನೈಸ್ ಸಂಸ್ಥೆ ಅಡ ಇಟ್ಟಿತ್ತು. ಇದರಿಂದ ಯಾವ ಪುರುಷಾರ್ಥ ಸಾಧಿಸಿದಂತೆ ಆಯಿತು? ನಮ್ಮ ರೈತರ ಜಮೀನು ತೆಗೆದುಕೊಂಡು ಹಣ ನೀಡಿಲ್ಲ. ಅನೇಕ ಜನರು ಈಗಲೂ ಒದ್ದಾಡುತ್ತಿದ್ದಾರೆ ಎಂದು ಹೇಳಿದರು. ಇದು ನನ್ನ ಕನಸಿನ ಯೋಜನೆಯಾಗಿತ್ತು. ಉತ್ತಮ ರಸ್ತೆ ಆಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಗೆ ಅನುಮೋದನೆ ಕೊಟ್ಟಿದ್ದೆ. ಆದರೆ ಈಗ ಏನಾಗುತ್ತಿದೆ ಎಂದು ಪ್ರಶ್ನಿಸಿದರು.