ಕೊಡಗು: ಹುಲಿ ಹತ್ಯೆ ಪ್ರಕರಣದಲ್ಲಿ ಏಳು ಆರೋಪಿಗಳ ಬಂಧನ, ಮೃತದೇಹ ವಶಕ್ಕೆ
ಹುಲಿ ಹತ್ಯೆ ಮಾಡಿ, ಅವುಗಳ ಉಗುರು, ಚರ್ಮ ಹಾಗೂ ಇತರ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕುಶಾಲನಗರ ತಾಲೂಕಿನ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಬಳಿ ಈ ಘಟನೆ ವರದಿಯಾಗಿದೆ.
Published: 04th April 2022 08:02 AM | Last Updated: 04th April 2022 08:05 AM | A+A A-

ಸಾಂದರ್ಭಿಕ ಚಿತ್ರ
ಮಡಿಕೇರಿ: ಹುಲಿ ಹತ್ಯೆ ಮಾಡಿ, ಅವುಗಳ ಉಗುರು, ಚರ್ಮ ಹಾಗೂ ಇತರ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕುಶಾಲನಗರ ತಾಲೂಕಿನ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಬಳಿ ಈ ಘಟನೆ ವರದಿಯಾಗಿದೆ.
ಆರೋಪಿಗಳನ್ನು ಗಣೇಶ್, ಯೋಗೇಶ್, ದೊರೇಶ್, ನಟೇಶ್ ರಮೇಶ್, ನವೀನ್ ಮತ್ತು ಶೇಖರ್ ಎಂದು ಗುರುತಿಸಲಾಗಿದೆ. ಗಣೇಶ್ ಮತ್ತು ಯೋಗೇಶ್ ಎಂಬುವರು ಗ್ರಾಮದ ತಮ್ಮ ಜಮೀನಿನಲ್ಲಿ ಕಾಡಾನೆಗಳ ಕಾಟ ತಡೆಯಲು ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದರು ಎನ್ನಲಾಗಿದೆ. ಆದರೆ, ಬಲೆಗೆ ಹುಲಿ ಸಿಕ್ಕಿಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ. ಇದರ ಬೆನ್ನಲ್ಲೇ ಗಣೇಶ್ ಮತ್ತು ಯೋಗೇಶ್ ಇತರ ಆರೋಪಿಗಳ ಸಹಾಯ ಪಡೆದು ಹುಲಿಯನ್ನು ಸಮೀಪದಲ್ಲೇ ಹೂತು ಹಾಕಿದ್ದಾರೆ.
ಆದರೆ, ರಮೇಶ್, ನಟೇಶ್ ಮತ್ತು ದೊರೇಶ್ ರಾತ್ರಿ ವೇಳೆ ಹುಲಿ ಹೂತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಹುಲಿಯನ್ನು ಹೊರಗೆ ತೆಗೆದು, ಅದರ ಹಲ್ಲುಗಳು, ಉಗುರುಗಳು ಮತ್ತು ಚರ್ಮಗಳನ್ನು ಕತ್ತರಿಸಿದ್ದಾರೆ. ನಂತರ ಏಳು ಮಂದಿ ಆರೋಪಿಗಳನ್ನು ಹುಲಿಯ ದೇಹದ ಭಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಐಡಿ ಅರಣ್ಯ ಕೋಶದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಶವವನ್ನು ಹೊರತೆಗೆದಿದ್ದಾರೆ. ಹುಲಿಯ ಮೂಳೆ, ತಲೆಬುರುಡೆ, ಉಗುರು, ಹಲ್ಲು, ಚರ್ಮ ಸೇರಿದಂತೆ ಎಲ್ಲಾ ಭಾಗಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಿಐಡಿ ಅರಣ್ಯ ವಿಭಾಗದ ಎಡಿಜಿಪಿ ಕೆ.ವಿ.ಶರತ್ ಚಂದ್ರ, ಮಡಿಕೇರಿ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮತ್ತಿತರರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.