ಹಾಸನ: ಗುತ್ತಿಗೆದಾರರಿಂದ 10 ಮಹಿಳೆಯರು ಸೇರಿದಂತೆ 55 ಜೀತದಾಳುಗಳ ರಕ್ಷಣೆ
ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅರಸಿಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಫಾರ್ಮ್ ಹೌಸ್ ವೊಂದರಲ್ಲಿ ಜೀತದಾಳುಗಳಾಗಿ ಬಂಧಿಯಾಗಿದ್ದ 10 ಮಹಿಳೆಯರು ಸೇರಿದಂತೆ 55 ಜನರನ್ನು ರಕ್ಷಿಸಿದೆ.
Published: 05th April 2022 08:43 PM | Last Updated: 05th April 2022 08:47 PM | A+A A-

ಸಾಂದರ್ಭಿಕ ಚಿತ್ರ
ಹಾಸನ: ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅರಸಿಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಫಾರ್ಮ್ ಹೌಸ್ ವೊಂದರಲ್ಲಿ ಜೀತದಾಳುಗಳಾಗಿ ಬಂಧಿಯಾಗಿದ್ದ 10 ಮಹಿಳೆಯರು ಸೇರಿದಂತೆ 55 ಜನರನ್ನು ರಕ್ಷಿಸಿದೆ. ಇವರನ್ನು ಅಸಭ್ಯವಾಗಿ ನಡೆಸಿಕೊಳ್ಳುತ್ತಿದ್ದ ಮುನೇಶ್ ಎಂಬ ಗುತ್ತಿಗೆದಾರನ ಕಪಿಮುಷ್ಠಿಯಿಂದ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಉದ್ಯೋಗದ ಆಮಿಷವೊಡ್ಡಿ ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರ, ಚಿಕ್ಕನಾಯಕನಹಳ್ಳಿ, ಮಧುಗಿರಿ, ಸಿರಾ, ತಿಪಟೂರು, ಶಿವಮೊಗ್ಗ, ಕಲಬುರಗಿ, ಹರಿಹರ, ದಾವಣಗೆರೆಯಿಂದ ಕರೆತಂದಿದ್ದ ಗುತ್ತಿಗೆದಾರ, ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ರಾತ್ರಿ ಹೊತ್ತು ಗೋಡೌನ್ ಮತ್ತು ದನದ ಶೆಡ್ ಗಳಲ್ಲಿ ಕೂಡಿ ಹಾಕಿದ್ದ, ಬೆಳಗ್ಗೆ ಹೊತ್ತು ವಿವಿಧ ಕಾಫಿ ಎಸ್ಟೇಟ್ ಮತ್ತು ಶುಂಠಿ ತೋಟಗಳಲ್ಲಿ ಕೆಲಸ ಹಂಚಿದ್ದ ಎನ್ನಲಾಗಿದೆ.
ಈ ಕಾರ್ಮಿಕರ ಪೈಕಿ ಅನೇಕ ಮಂದಿ ಹಲವು ವರ್ಷಗಳ ಕಾಲ ಜೀತದಾಳುಗಳಾಗಿ ದುಡಿಯುತ್ತಿದ್ದರು ಎಂದು ಮೂಲಗಳು ಹೇಳಿವೆ. ಗುತ್ತಿಗೆದಾರ ಮುನೇಶ್ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಕ್ಷಿಸಿದ ಕಾರ್ಮಿಕರನ್ನು ಅವರ ಸ್ವ ಗ್ರಾಮಗಳಿಗೆ ಕಳುಹಿಸಲಾಗುವುದು, ಸಂಬಂಧಿತ ಜಿಲ್ಲೆಗಳು ಹಾಗೂ ಸ್ಥಳೀಯ ಅಡಳಿತದಿಂದ ಅವರ ಕುಟುಂಬಗಳಿಗೆ ಸಾಮಾಜಿಕ ಸುರಕ್ಷತಾ ಯೋಜನೆಗಳಡಿ ಅನುಕೂಲಗಳನ್ನು ಒದಗಿಸಲಾಗುವುದು ಎಂದು ಎಸ್ ಪಿ ಶ್ರೀನಿವಾಸಗೌಡ ಹೇಳಿದ್ದಾರೆ.