ಐಎಂಎ ಹಗರಣ: ಬಾಕಿ ಹಣ ವಾಪಸ್ಸಾತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಮೊದಲ ಆದ್ಯತೆ
ಐಎಂಎ ಪ್ರಕರಣದಲ್ಲಿ ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿ ಹಣ ವಾಪಸ್ಸಾತಿಗಾಗಿ ಮನವಿ ಮಾಡಿ ಬಂದಿರುವ ಅರ್ಜಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
Published: 06th April 2022 02:44 PM | Last Updated: 06th April 2022 03:11 PM | A+A A-

ಐಎಂಎ
ಬೆಂಗಳೂರು: ಐಎಂಎ ಪ್ರಕರಣದಲ್ಲಿ ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿ ಹಣ ವಾಪಸ್ಸಾತಿಗಾಗಿ ಮನವಿ ಮಾಡಿ ಬಂದಿರುವ ಅರ್ಜಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ, ಹಂತ ಹಂತವಾಗಿ ಹಣ ವಾಪಸ್ಸಾತಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅಧಿಕಾರಿ ಮಾಹಿತಿ ನೀಡಿದ್ದು, ಬಾಕಿ ಹಣ ತಲುಪಿಸುವುದರಲ್ಲಿ ಸಣ್ಣ ಹೂಡಿಕೆದಾರರನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
69,000 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಒಟ್ಟು 2,600 ಕೋಟಿ ರೂಪಾಯಿ ಮೊತ್ತ ಇವರಿಗೆ ಐಎಂಎಯಿಂದ ಕೊಡಿಸಬೇಕಿದೆ. ಐಎಂಎ ಸಮೂಹದಲ್ಲಿ ಡೆಪಾಸಿಟರ್ ಗಳಿಗೆ ಪಾವತಿ ಮಾಡಬೇಕಿರುವ ಹಣಕ್ಕಿಂತಲೂ ಕಡಿಮೆ ಪ್ರಮಾಣದ ಹಣವಿರುವ ಕಾರಣ, ಠೇವಣಿದಾರರು ಈಗಾಗಲೇ ಸ್ವೀಕರಿಸಿದ ಠೇವಣಿಗಳ ಮೇಲಿನ ಆದಾಯವನ್ನು ಕಡಿತಗೊಳಿಸುವ ಪರಿಹಾರವನ್ನು ವಿಶೇಷ ಕೋರ್ಟ್ ಸೂಚಿಸಿತ್ತು.
ಈ ಸೂತ್ರ ಅನ್ವಯಿಸಿದ ಬಳಿಕವೂ ಒಟ್ಟಾರೆ ಮೊತ್ತ 1,260 ಕೋಟಿ ರೂಪಾಯಿಗಳನ್ನು ಠೇವಣಿದಾರರಿಗೆ ನೀಡಬೇಕಿದೆ. ಆದರೆ ಐಎಂಎ ನಲ್ಲಿ 400 ಕೋಟಿ ರೂಪಾಯಿ ಮೌಲ್ಯದಷ್ಟು ಮಾತ್ರವೇ ಆಸ್ತಿ ಇದೆ. ಇದನ್ನು ಪರಿಗಣಿಸಿರುವ ವಿಶೇಷ ಕೋರ್ಟ್, ಸಣ್ಣ ಹೂಡಿಕೆದಾರರಿಗೆ (2 ಲಕ್ಷ ರೂಪಾಯಿಯಷ್ಟು ಹೂಡಿಕೆ ಮಾಡಿದ್ದವರಿಗೆ) ಹಾಗೂ 50,000 ರೂಪಾಯಿಗಳಿಗಿಂತ ಕಡಿಮೆ ಬಾಕಿ ಇರುವವರಿಗೆ ಆದ್ಯತೆಯ ಮೇರೆಗೆ ವಾಪಸ್ ನೀಡಬೇಕೆಂದು ಆದೇಶಿಸಿತ್ತು.