ನೈತಿಕ ಪೊಲೀಸ್ ಗಿರಿಯಡಿ ಬಂಧನ: ನೆರವಿಗೆ ಬಾರದ ಪುತ್ತೂರು ಶಾಸಕನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ
ಕಳೆದ ಮಂಗಳವಾರ ಉಪ್ಪಿನಂಗಡಿ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಬಂಧಿತರಾದವರ ರಕ್ಷಣೆಗೆ ಬರಲಿಲ್ಲವೆಂದು ಪುತ್ತೂರಿನ ಶಾಸಕರ ಮೇಲೆ ಹಿಂದುತ್ವ ಗುಂಪಿನವರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಶಾಸಕರ ಮೇಲೆ ಗುಂಪುಗೂಡಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published: 07th April 2022 01:12 PM | Last Updated: 07th April 2022 01:43 PM | A+A A-

ಸಾಂಕೇತಿಕ ಚಿತ್ರ
ಮಂಗಳೂರು: ಕಳೆದ ಮಂಗಳವಾರ ಉಪ್ಪಿನಂಗಡಿ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಬಂಧಿತರಾದವರ ರಕ್ಷಣೆಗೆ ಬರಲಿಲ್ಲವೆಂದು ಪುತ್ತೂರಿನ ಶಾಸಕರ ಮೇಲೆ ಹಿಂದುತ್ವ ಗುಂಪಿನವರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಶಾಸಕರ ಮೇಲೆ ಗುಂಪುಗೂಡಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳವಾರ ಇಬ್ಬರು ಆರೋಪಿಗಳ ಬಂಧನವಾಗುತ್ತಿದ್ದಂತೆ ಹಿಂದುತ್ವ ಗುಂಪಿನ ಸದಸ್ಯರು ಪುತ್ತೂರು ಶಾಸಕ ಸಂಜೀವ ಮಠಂದೂರ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಶಾಸಕರು ಬೆಂಗಳೂರಿಗೆ ಹೋಗಲು ಉಪ್ಪಿನಂಗಡಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಶಾಸಕರ ವಿರುದ್ಧ ಘೋಷಣೆ ಕೂಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡುವುದಕ್ಕೆ ಮುನ್ನ ಹಿಂದುತ್ವ ಸಂಘಟನೆಯ ಕೆಲವರು ಶಾಸಕರನ್ನು ಬಸ್ ನಿಲ್ದಾಣದಲ್ಲಿ ಭೇಟಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಮಂಗಳವಾರ ರಾತ್ರಿ 11.30ರ ಸುಮಾರಿಗೆ ಶಾಸಕರು ಬೆಂಗಳೂರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದಾಗ ಸುಮಾರು 50 ಮಂದಿ ಬಂದು ಸುತ್ತುವರೆದು ಹಲ್ಲೆ ನಡೆಸಿದ್ದಾರೆ.
ಪಕ್ಕದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಘಟನೆಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ಅಲ್ಲ ಎಂದು ಶಾಸಕ ಮಠಂದೂರು ಹೇಳುತ್ತಿದ್ದಂತೆ ಹಲ್ಲೆ ನಡೆಸಿದ್ದಾರೆ. ನಂತರ ಶಾಸಕರು ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದಾಗ ಪ್ರತಿಭಟನಾಕಾರರು ಅಲ್ಲಿಂದ ಹೊರಟುಹೋಗಿದ್ದಾರೆ.