ಬೆಂಗಳೂರು vs ಹೈದರಾಬಾದ್: 'ಸೌಲಭ್ಯ ಕೊರತೆ' ಮೈಲೇಜ್ ಪಡೆಯಲು ಕೆಟಿ ರಾಮರಾವ್, ಡಿಕೆಶಿ ಹವಣಿಕೆ!
ಬೆಂಗಳೂರು ಮೂಲದ ಉದ್ಯಮಿ ರವೀಶ್ ನರೇಶ್ ಅವರು ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯ ಕುರಿತು ವ್ಯಕ್ತಪಡಿಸಿರುವ ಅಸಮಾಧಾನದ ಲಾಭವನ್ನು ರಾಜಕೀಯವಾಗಿ ಪಡೆಯಲು ಕೆಟಿ ರಾಮರಾವ್, ಡಿಕೆ ಶಿವಕುಮಾರ್ ಇಬ್ಬರೂ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
Published: 07th April 2022 11:15 AM | Last Updated: 29th April 2022 05:51 PM | A+A A-

ವಿಧಾನಸೌಧ
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಪತ್ರಿಕೆಯ ಮುಖಪುಟಗಳಲ್ಲಿ ಅಥವಾ ಟೀವಿ ವಾರ್ತೆಗಳ ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದಲೋ ಅಥವಾ ಹೆಚ್ಚು ಜನರ ಗಮನವನ್ನು ಸೆಳೆಯುವುದಕ್ಕಾಗಿಯೋ, ರಾಜಕಾರಣಿಗಳು ವಾಕ್ಚಾತುರ್ಯದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ತೆಲಂಗಾಣ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಕೆ.ಟಿ. ರಾಮರಾವ್ ಅವರ ಟ್ವೀಟ್ ಹೇಳಿಕೆಗಳು ಮತ್ತು ಅವುಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರತ್ಯುತ್ತರಗಳು ಇದಕ್ಕೊಂದು ತಾಜಾ ನಿದರ್ಶನವಾಗಿದೆ. ಬೆಂಗಳೂರು ಮೂಲದ ಉದ್ಯಮಿ ರವೀಶ್ ನರೇಶ್ ಅವರು ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯ ಕುರಿತು ವ್ಯಕ್ತಪಡಿಸಿರುವ ಅಸಮಾಧಾನದ ಲಾಭವನ್ನು ರಾಜಕೀಯವಾಗಿ ಪಡೆಯಲು ಇಬ್ಬರೂ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬೆಂಗಳೂರು ನಗರದ ಎಚ್ಎಸ್ಆರ್ ಲೇಔಟ್ ಮತ್ತು ಕೋರಮಂಗಲದಲ್ಲಿ ಹಲವು ನವೋದ್ಯಮ (ಸ್ಟಾರ್ಟ್-ಅಪ್)ಗಳು ಶತಕೋಟಿ ಡಾಲರ್ಗಳಷ್ಟು ಆದಾಯವನ್ನು ಉತ್ಪಾದಿಸುತ್ತಿದ್ದರೂ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದರೂ ಕೆಟ್ಟ ರಸ್ತೆಗಳು, ವಿದ್ಯುತ್ ಕಡಿತ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ರವೀಶ್ ನರೇಶ್ ಅವರು ಟೀಕಿಸಿದ್ದರು.
ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲು ತ್ಯಾಗರಾಜನ್ ಅವರೂ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ಕರ್ನಾಟಕದ ವಿದ್ಯಮಾನಗಳ ಮೇಲೆ ತಮ್ಮ ರಾಜ್ಯವು ನಿಗಾ ಇರಿಸಿದೆ ಎಂದು ಅವರು ಹೇಳಿದ್ದಾರೆ. ಮತ್ತು, ಐಟಿ ಕಂಪನಿಗಳು ತಮಿಳುನಾಡಿಗೆ ವೈವಿಧ್ಯವನ್ನು ಒದಗಿಸಲು ಅತೀವ ಆಸಕ್ತಿಯನ್ನು ತಾಳಿವೆ.
ಬೆಂಗಳೂರು ನಗರವು ಜನಸಂಖ್ಯೆ ಮತ್ತು ಖಾಸಗಿ ಹೂಡಿಕೆಯಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಕಾರಣ, ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಮೂಲಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿರುವುದು ಹೊಸದೇನಲ್ಲ. ಆದರೆ ಈ ಮೂವರು ರಾಜಕಾರಣಿಗಳು ಮಾಡುತ್ತಿರುವ ಪ್ರಯತ್ನ ಒಂದೇ: ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಇವರೆಲ್ಲರಿಗೂ ಸಮಾನ ಶತ್ರು. ಬೆಂಗಳೂರಿನ ಮೂಲಸೌಕರ್ಯಗಳ ಕುರಿತು ಉದ್ಯಮಿಯೊಬ್ಬರ ಹೇಳಿಕೆಯೊಂದನ್ನು ಬಳಸಿಕೊಂಡು ಅವರು ಮೈಲೇಜ್ ಪಡೆಯಲು ಮುಂದಾಗಿದ್ದಾರೆ, ಅಷ್ಟೇ. 10,000 ಕೋಟಿ ರೂ.ಗಳ ಮೆಟ್ರೋ ಯೋಜನೆಗೆ ಹೈದರಾಬಾದ್ ಅನ್ನು ಅವಗಣಿಸಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕೆ.ಟಿ. ರಾಮ ರಾವ್ ಅವರು ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ವೇಳೆ, 2023ರಲ್ಲಿ ತಮ್ಮ ಪಕ್ಷ (ಕಾಂಗ್ರೆಸ್) ಅಧಿಕಾರಕ್ಕೆ ಬಂದರೆ ಹೈದರಾಬಾದ್ಗೆ ಸವಾಲೊಡ್ಡುವ ರೀತಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೇಸರಿ ಪಕ್ಷಕ್ಕೆ ತಲೆ ಎತ್ತಲು ತಮಿಳುನಾಡು ಈವರೆಗೂ ಅವಕಾಶ ನೀಡಿಲ್ಲ.
ರವೀಶ್ ನರೇಶ್ ಬೆಂಗಳೂರಿನಿಂದ ತಮ್ಮ ಉದ್ಯಮವನ್ನು ಪ್ಯಾಕ್ ಅಪ್ ಮಾಡಿ ಹೈದರಾಬಾದ್ನಲ್ಲಿ ನೆಲೆಸಬಹುದು. ಏಕೆಂದರೆ, ಅದು ಬೆಂಗಳೂರಿಗಿಂತ ಉತ್ತಮವಾಗಿದೆ ಎಂದು ಕೆ.ಟಿ. ರಾಮರಾವ್ ಹೇಳುತ್ತಾರೆ. 2020ರಲ್ಲಿ ಹೈದರಾಬಾದ್ನಲ್ಲಿ ದೊಡ್ಡ ಪ್ರಮಾಣದ ಪ್ರವಾಹವುಂಟಾಗಿ ಸಾಕಷ್ಟು ಪ್ರದೇಶಗಳು ಮುಳುಗಿದ್ದವು. ಮಳೆ ನೀರು ಮನೆಗಳು, ಕಚೇರಿಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ನುಗ್ಗಿ ಎಷ್ಟು ಹಾವಳಿ ಮಾಡಿತ್ತೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರವಾಹದ ಅಬ್ಬರ ಎಷ್ಟಿತ್ತೆಂದರೆ, ಅದು ಇನ್ಫೋಸಿಸ್ ಸೇರಿದಂತೆ ಐಟಿ ಕಚೇರಿಗಳನ್ನೂ ಬಿಟ್ಟಿಲ್ಲ. ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ಪಕ್ಷ ಡಿ.ಕೆ. ಶಿವಕುಮಾರ್ ಅವರದೇ ಎಂಬುದನ್ನು ಮರೆಯುವುದಾದರೂ ಹೇಗೆ? ತ್ಯಾಜ್ಯ ವಿಲೇವಾರಿಯ ಸಮಸ್ಯೆಯಿಂದಾಗಿ 2012ರಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಗ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. 1956ರಲ್ಲಿ ಏಕೀಕರಣಗೊಂಡ ಕರ್ನಾಟಕ ರಾಜ್ಯ ರಚನೆಯಾದಾಗಿನಿಂದ ಅವರ ಪಕ್ಷ 26ಕ್ಕಿಂತ ಕಡಿಮೆಯಿಲ್ಲದಷ್ಟು ಸಂಖ್ಯೆಯ ಮುಖ್ಯಮಂತ್ರಿಗಳನ್ನು ನೀಡಿದೆ. ಹಾಗಾದರೆ, ರಾಜಧಾನಿಗೆ ಏನಾದರೂ ಒಳ್ಳೆಯದನ್ನು ಮಾಡಲು ತನ್ನ ಪಕ್ಷವು ಮತ್ತೆ ಅಧಿಕಾರಕ್ಕೆ ಬರಬೇಕೆಂದು ಅವರು ಹೇಗೆ ಬಯಸುತ್ತಾರೆ?
ಹೈದರಾಬಾದ್ ನಗರವು ನ್ಯೂಯಾರ್ಕ್ ಸಿಟಿಯಂತೆ ಕಂಗೊಳಿಸಲಿದೆ ಎಂದು ಕೆ.ಟಿ.ಆರ್. ಹೇಳಿಕೊಂಡಿದ್ದರು. ಬೆಂಗಳೂರನ್ನು ಮುಂದಿನ ಸಿಂಗಾಪುರ ಮಾಡುವುದಾಗಿ ಎಸ್.ಎಂ. ಕೃಷ್ಣ ಅವರೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಇವೆರಡೂ ಕೇವಲ ಹೇಳಿಕೆಗಳಷ್ಟೇ. ಅಂತಹ ಹೇಳಿಕೆಗಳನ್ನು ಯಾರು ಬೇಕಾದರೂ, ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಕೊಡಬಹುದು. ಬೆಂಗಳೂರು ಕೇವಲ ಆದಾಯ ತರುವ ಕೇಂದ್ರವಾಗಿದೆ. ಆಡಳಿತಾರೂಢ ಬಿಜೆಪಿ ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲೂ ವಿಫಲವಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್ಗಳು ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಿರುವುದು ರಾಜಕಾರಣಿಗಳಿಂದಲ್ಲ, ಅಲ್ಲಿರುವ ಪ್ರತಿಭಾ ಸಂಗಮದಿಂದ. ಎರಡೂ ನಗರಗಳಲ್ಲಿ ಮೂಲಸೌಕರ್ಯ ಹಾಗೂ ಸೌಲಭ್ಯಗಳ ಕೊರತೆಯ ಹೊರತಾಗಿಯೂ ಉನ್ನತ ಬಹುರಾಷ್ಟ್ರೀಯ ಕಂಪನಿ (MNC) ಗಳ ಬ್ಯಾಕ್ ಆಫೀಸ್ಗಳು ಈ ಎರಡು ನಗರಗಳಲ್ಲಿವೆ.
ಲಂಡನ್ ಮೇಯರ್ ಅವರ ಪ್ರಚಾರ ಏಜೆನ್ಸಿಯಾಗಿರುವ ಲಂಡನ್ ಅಂಡ್ ಪಾರ್ಟ್ನರ್ಸ್ ಪ್ರಕಾರ, 2008 ಮತ್ತು 2018ರ ನಡುವಿನ 10 ವರ್ಷಗಳ ಅವಧಿಯ ಒಟ್ಟಾರೆ ವಿಶ್ಲೇಷಣೆಯಲ್ಲಿ, ಐಸಿಟಿ (Information and Communication Technology- ICT) ಮತ್ತು ಎಲೆಕ್ಟ್ರಾನಿಕ್ ವಲಯಗಳ ಉನ್ನತ ತಾಣಗಳ ಪೈಕಿ ಬೆಂಗಳೂರು ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಇದೇ ವಿಶ್ಲೇಷಣೆಯಲ್ಲಿ ಹೈದರಾಬಾದ್ 14ನೇ ಸ್ಥಾನದಲ್ಲಿದೆ.
2021ರಲ್ಲಿ ಸುರಿದ ಮಹಾಮಳೆಗೆ ಚೆನ್ನೈ ನಗರ ಮುಳುಗಡೆಯಾಗಿದ್ದು, ಆಗ ಹಾನಿಗೀಡಾದ ರಸ್ತೆಗಳ ಪೈಕಿ 803 ರಸ್ತೆಗಳ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ ಎಂಬುದನ್ನು ತಮಿಳುನಾಡಿನ ಸಚಿವ ತ್ಯಾಗರಾಜನ್ ಮರೆಯಬಾರದು. 2015ರಲ್ಲೂ ಚೆನ್ನೈ ನಗರದಲ್ಲಿ ನೀರು ನಿಂತಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಚೆನ್ನೈನ ಸಂಪ್ರದಾಯವಾದಿ ದೃಷ್ಟಿಕೋನವು ಒಂದು ಅಂತರ್ಗತ ನಗರವಾಗಿ ಬೆಳೆಯಲು ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂಬುದೂ ನಿಜ.
