ಹೂಡಿಕೆದಾರರ ಆಕರ್ಷಿಸಲು ಕರ್ನಾಟಕದ ವಿರುದ್ಧ ಆಪಾದನೆ ಸರಿಯಲ್ಲ: ತಮಿಳುನಾಡು, ತೆಲಂಗಾಣ ವಿರುದ್ಧ ಸಿಎಂ ಬೊಮ್ಮಾಯಿ, ಅಶ್ವತ್ಥ್ ನಾರಾಯಣ್ ಕಿಡಿ
ಕರ್ನಾಟಕದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ, ಕೋಮು ವಿಚಾರಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ ಎಂದು ಹೇಳಿ ಹೂಡಿಕೆದಾರರನ್ನು ತಮ್ಮತ್ತ ಆಕರ್ಷಿಸಲು ನೆರೆಯ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಪ್ರಯತ್ನಿಸುತ್ತಿದೆ...
Published: 09th April 2022 07:43 AM | Last Updated: 09th April 2022 01:27 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಕರ್ನಾಟಕದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ, ಕೋಮು ವಿಚಾರಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ ಎಂದು ಹೇಳಿ ಹೂಡಿಕೆದಾರರನ್ನು ತಮ್ಮತ್ತ ಆಕರ್ಷಿಸಲು ನೆರೆಯ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ತೆಲಂಗಾಣ ಐಟಿ ಸಚಿವ ಕೆಟಿ ರಾಮರಾವ್ ನಂತರ, ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಬೆಂಗಳೂರಿನಲ್ಲಿ ಕೋಮು ವಿವಾದಗಳಿದ್ದು, ಕಳಪೆಮಟ್ಟದ ರಸ್ತೆಗಳಿವೆ ಎಂದು ಹೇಳಿ ತಮ್ಮ ರಾಜ್ಯದತ್ತ ಹೂಡಿಕೆದಾರರನ್ನು ಆಕರ್ಷಿಸಲು ಯತ್ನಿಸಿದ್ದಾರೆಂಬ ವರದಿಗಳು ಕೇಳಿ ಬಂದಿವೆ.
ಇದನ್ನೂ ಓದಿ: ಬೆಂಗಳೂರು vs ಹೈದರಾಬಾದ್: 'ಸೌಲಭ್ಯ ಕೊರತೆ' ಮೈಲೇಜ್ ಪಡೆಯಲು ಕೆಟಿ ರಾಮರಾವ್, ಡಿಕೆಶಿ ಹವಣಿಕೆ!
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕರ್ನಾಟಕ ಮತ್ತು ಈ ರಾಜ್ಯಗಳ ನಡುವೆ ಯಾವುದೇ ಹೋಲಿಕೆ ಇಲ್ಲ, ಏಕೆಂದರೆ ವಿಶ್ವದಾದ್ಯಂತ ಹೂಡಿಕೆದಾರರನ್ನು ರಾಜ್ಯವು ಆಕರ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ತ್ರೈಮಾಸಿಕಗಳಲ್ಲಿ ರಾಜ್ಯವು ದೇಶಕ್ಕೆ ಗರಿಷ್ಠ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ. ತಮ್ಮತ್ತ ಹೂಡಿಕೆದಾರರನ್ನು ಆಕರ್ಷಿಸಲು ಇತರೆ ರಾಜ್ಯಗಳ ಮೇಲೆ ಆಪಾದನೆ ಮಾಡುವುದು ಅವರ ಗುಣವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.