ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ನಾಯಕ
ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಕರೆ ನೀಡಿದ್ದು ವಿವಾದದ ಕಿಡಿ ಹೊತ್ತುಕೊಂಡಿದೆ.
Published: 09th April 2022 10:21 PM | Last Updated: 09th April 2022 10:21 PM | A+A A-

ಬಿಜೆಪಿ ಧ್ವಜ
ಹುಬ್ಬಳ್ಳಿ: ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಕರೆ ನೀಡಿದ್ದು ವಿವಾದದ ಕಿಡಿ ಹೊತ್ತುಕೊಂಡಿದೆ.
ಮುಸ್ಲಿಂ ಯುವಕರನ್ನು ವಿವಾಹವಾಗುವ ಹಿಂದೂ ಯುವತಿಯರ ಕುಟುಂಬಗಳನ್ನು ಬಹಿಷ್ಕರಿಸಬೇಕೆಂದು ಕರೆ ನೀಡಲು ನಾಗೇಶ್ ಕಲಬುರಗಿ ತಮ್ಮ ಅಧಿಕೃತ ಪತ್ರವನ್ನು ಬಳಕೆ ಮಾಡಿದ್ದಾರೆ.
ಈ ಕರೆ ಎಸ್ಎಸ್ ಕೆ (ಸಹಸ್ರಾರ್ಜುನ ಸೋಮವಂಶ ಕ್ಷತ್ರಿಯ) ಸಮುದಾಯಕ್ಕೆ ನಿರ್ದಿಷ್ಟವಾಗಿ ನೀಡಲಾಗಿದ್ದು, ಸಮುದಾಯದ ಯುವತಿಯೊಬ್ಬಳು ಇತ್ತೀಚೆಗೆ ಮುಸ್ಲಿಮ್ ಯುವಕನ ಜೊತೆ ಓಡಿಹೋಗಿ ವಿವಾಹವಾಗಿದ್ದಳು. ಈ ಘಟನೆಯನ್ನು ಹಿಂದೂ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರು ಲವ್ ಜಿಹಾದ್ ಎಂದು ಆರೋಪಿಸಿದ್ದರಾದರೂ ಆ ಯುವತಿ ಸ್ವತಃ ಹೇಳಿಕೆ ನೀಡಿದ್ದು ತನ್ನ ಅನುಮತಿಯ ಮೇರೆಗೇ, ಸ್ವಇಚ್ಛೆಯಿಂದ ಈ ವಿವಾಹ ನಡೆದಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಳು.
ನಾಗೇಶ್ ಕಲಬುರಗಿ ಸಮುದಾಯದ ಮುಖಂಡನಾಗಿದ್ದು, ಎಸ್ಎಸ್ ಕೆಎಂ ಸಮಾಜ ಪಂಚ ಟ್ರಸ್ಟ್ ಸಮಿತಿಗೆ ಪತ್ರ ಬರೆದು, ಮುಸ್ಲಿಂ ಯುವಕನನ್ನು ವಿವಾಹವಾಗುವ ಸಮುದಾಯದ ಯುವತಿಯರ ಕುಟುಂಬಗಳಿಗೆ ಬಹಿಷ್ಕಾರ ಹಾಕಬೇಕು ಎಂದು ಹೇಳಿ ಲವ್ ಜಿಹಾದ್ ತಡೆಗೆ 5 ಕ್ರಮಗಳನ್ನು ಸಲಹೆ ನೀಡಿದ್ದರು.
ಆದರೆ ಬಿಜೆಪಿಯ ಈ ನಾಯಕನ ನಡೆಗೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಸರ್ಕಾರದ ಸ್ಥಾನವನ್ನು ಹೊಂದಿದ್ದು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಲು ಹೇಗೆ ಸಾಧ್ಯ? ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದು ಕಲಬುರಗಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.