ಹೂಡಿಕೆದಾರರು, ಕೈಗಾರಿಕೋದ್ಯಮಿಗಳು ಕರ್ನಾಟಕ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ: ಸಚಿವ ಮುರುಗೇಶ್ ನಿರಾಣಿ

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಕೋಮು ವಿವಾದಗಳು ಭುಗಿಲೆದ್ದಿದ್ದು, ಇದು ರಾಜ್ಯದ ಹೂಡಿಕೆಯ ಮೇಲೆ ಪರಿಣಾಮ ಬೀರುವ ಕಳವಳವನ್ನು ಹುಟ್ಟುಹಾಕಿದೆ. ಈ ಕುರಿತು ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ ಅವರು, ರಾಜ್ಯದ ಈ ಪರಿಸ್ಥಿತಿಯು ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ರಾಜ್ಯದಲ್ಲಿ ಎದ್ದಿರುವ ಸಮಸ್ಯೆಗಳು ಶೀಘ್ರದಲ್ಲೇ ದೂರಾಗಲಿದೆ ಎಂದು ಹೇಳಿದ್ದಾರೆ.

Published: 10th April 2022 02:27 PM  |   Last Updated: 10th April 2022 02:27 PM   |  A+A-


Murugesh Nirani

ಮುರುಗೇಶ್ ನಿರಾಣಿ

The New Indian Express

ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಕೋಮು ವಿವಾದಗಳು ಭುಗಿಲೆದ್ದಿದ್ದು, ಇದು ರಾಜ್ಯದ ಹೂಡಿಕೆಯ ಮೇಲೆ ಪರಿಣಾಮ ಬೀರುವ ಕಳವಳವನ್ನು ಹುಟ್ಟುಹಾಕಿದೆ. ಈ ಕುರಿತು ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ ಅವರು, ರಾಜ್ಯದ ಈ ಪರಿಸ್ಥಿತಿಯು ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ರಾಜ್ಯದಲ್ಲಿ ಎದ್ದಿರುವ ಸಮಸ್ಯೆಗಳು ಶೀಘ್ರದಲ್ಲೇ ದೂರಾಗಲಿದೆ ಎಂದು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಸಚಿವ ಮುರುಗೇಶ್ ನಿರಾಣಿಯವರು ರಾಜ್ಯದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ.

ಕೋಮು ವಿವಾದ ರಾಜ್ಯದಲ್ಲಿ ಭುಗಿಲೆದ್ದಿದ್ದು, ಈ ಸಂದರ್ಭದಲ್ಲಿ ಹೂಡಿಕೆದಾರರಲ್ಲಿ ಎದುರಾಗಿರುವ ಆತಂಕವನ್ನು ದೂರಾಗಿಸುವುದು ಹೇಗೆ?
ಕರ್ನಾಟಕ ಎಂದಿಗೂ ಹೂಡಿಕೆದಾರರ ಸ್ವರ್ಗ. ನಮ್ಮ ರಾಜ್ಯ ಹೂಡಿಕೆದಾರರಿಗೆ ವಿಶ್ವದರ್ಜೆಯ ಸೌಲಭ್ಯ ಹಾಗೂ ಹೂಡಿಕೆ ಅವಕಾಶಗಳನ್ನು ನೀಡುತ್ತಿದ್ದು, ಈ ಸೌಲಭ್ಯ ಹಾಗೂ ಅವಕಾಶಗಳು ಯಾವುದೇ ರಾಜ್ಯದಲ್ಲೂ ಸಿಗುವುದಿಲ್ಲ. ಹಿಜಾಬ್ ಅಥವಾ ಹಲಾಲ್ ವಿವಾದಗಳು ರಾಜ್ಯದ ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಸಮಸ್ಯೆಗಳನ್ನು ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು  ಕರ್ನಾಟಕದ ಬೆಳವಣಿಗೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿವೆ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಕರ್ನಾಟಕವು ಭಾರತದ ಅತ್ಯುತ್ತಮ ಆಡಳಿತದ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಶಾಂತಿ ಕದಡುವ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಈ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುವ ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಯಾವುದೇ ಗುಂಪು ಅಥವಾ ವ್ಯಕ್ತಿಗಳಿಗೆ ದಿಟ್ಟ ಉತ್ತರವನ್ನು ನೀಡುತ್ತೇವೆ. ನಮ್ಮ ಪೋಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಇಂತಹ ಶತ್ರುಗಳನ್ನು ಎದುರಿಸಲು ಸಾಕಷ್ಟು ಸಮರ್ಥವಾಗಿವೆ.

ಹಿಜಾಬ್ , ಹಲಾಲ್ ಮಾಂಸದ ವಿರುದ್ಧದ ಅಭಿಯಾನ, ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸುವುದು ಮತ್ತು ಇದೀಗ ಮಸೀದಿಗಳಲ್ಲಿ ಎದ್ದಿರುವ ಧ್ವನಿವರ್ಧಕಗಳನ್ನು ನಿಯಂತ್ರಿಸುವ ಬೆಳವಣಿಗೆಗಳು ರಾಜ್ಯದ ಅಲ್ಪಾವಧಿಯ ಮತ್ತು ದೀರ್ಘಾವಧಿಯಲ್ಲಿನ ಹೂಡಿಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?
ಈ ಸಮಸ್ಯೆಗಳಿಗೂ ರಾಜ್ಯದ ಹೂಡಿಕೆಗೂ ಯಾವುದೇ ಸಂಬಂಧವಿಲ್ಲ. ಹಿಜಾಬ್ ವಿವಾದವು ಕಾನೂನಿನ ನಿಯಮಕ್ಕೆ ಸಂಬಂಧಿಸಿದೆ. ಶಾಲಾ ಸಮವಸ್ತ್ರದ ನಿಯಮವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಈ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹಲಾಲ್ ಮಾಂಸವು ಆಹಾರ ಪದ್ಧತಿ ಮತ್ತು ಕೆಲವು ಆಚರಣೆಗಳಿಗೆ ಸಂಬಂಧಿಸಿದೆ. ಜನರು ಯಾವ ರೀತಿಯ ಮಾಂಸವನ್ನು ಸೇವಿಸಬೇಕೆಂದು ಅವರೇ ನಿರ್ಧರಿಸುತ್ತಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ನಿಯಮವನ್ನು ಉಲ್ಲೇಖಿಸಿ ಕೆಲವು ಗುಂಪುಗಳು ಮುಸ್ಲಿಂ ವ್ಯಾಪಾರಿಗಳು ದೇವಾಲಯದ ಆವರಣದಲ್ಲಿ ಅಂಗಡಿಗಳನ್ನು ತೆರೆಯುವುದನ್ನು ತಡೆಯಲು ಕರೆ ನೀಡಿವೆ.

ರಂಜಾನ್ ಸಮಯದಲ್ಲಿ ಹಿಂದೂ ಅಂಗಡಿಗಳನ್ನು ಬಹಿಷ್ಕರಿಸುವಂತೆ ಕೆಲವು ಕಿಡಿಗೇಡಿ ಟಿಟ್-ಫಾಟ್-ಟ್ಯಾಟ್ ಎಂಬಂತೆ ಕರೆ ನೀಡಿದ್ದಾರೆ. ಆದರೆ ಸರಕಾರ ಈ ಬೆಳವಣಿಗೆಗಳಲ್ಲಿ ಯಾರ ಪರವಾಗಿಯೂ ನಿಲ್ಲುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಬದ್ಧರಾಗಿದ್ದೇವೆ. ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವುದು ಕೇವಲ ಮಸೀದಿಗಳಿಗೆ ಸೀಮಿತವಾಗಿಲ್ಲ; ಪೊಲೀಸ್ ಇಲಾಖೆ ಮತ್ತು ಮಾಲಿನ್ಯ ಮಂಡಳಿಯು ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್‌ಗಳಿಗೆ ನೋಟಿಸ್‌ಗಳನ್ನು ನೀಡಿದ್ದು, ಶಬ್ದ ಮಾಲಿನ್ಯವನ್ನು ತಡೆಯಲು ಡೆಸಿಬಲ್ ಮಟ್ಟದಲ್ಲಿ ನ್ಯಾಯಾಲಯದ ತೀರ್ಪನ್ನು ಪಾಲಿಸುವಂತೆ ಕೇಳಿದೆ. ಈ ಸಮಸ್ಯೆಗಳು ಹೂಡಿಕೆಯ ವಾತಾವರಣದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ದೇಶದ ಇತರ ರಾಜ್ಯಗಳು ಕೂಡ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ಕೆಲವರು ರಾಜ್ಯವನ್ನು ಮಾತ್ರ ದೂಷಿಸಿ ಕರ್ನಾಟಕದ ವರ್ಚಸ್ಸು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ.

ವಿವಾದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಎದುರಾಗಿರುವ ಕಳವಳಗಳ ದೂರಾಗಿಸಲು ಕೈಗಾರಿಕೆಕಾ ಸಂಸ್ಥೆಗಳು ಮತ್ತು ನಿರೀಕ್ಷಿತ ಹೂಡಿಕೆದಾರರೊಂದಿಗೆ ಸಭೆಗಳನ್ನು ನಡೆಸಲು ಯಾವುದೇ ಯೋಜನೆಗಳಿವೆಯೇ?
ಕೈಗಾರಿಕೆಗಳು, ವ್ಯಾಪಾರ ನಾಯಕರು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ನಮ್ಮ ಒಪ್ಪಂದಗಳು ನಿರಂತರವಾಗಿವೆ. ಉದ್ಯಮಿಗಳಿಂದ ಬರುವ ಸಲಹೆ ಹಾಗೂ ಅಭಿಪ್ರಾಯಗಳನ್ನು ನಾವು ಯಾವಾಗಲೂ ಸ್ವೀಕರಿಸುತ್ತೇವೆ. ಅವರ ಕಳವಳಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ನಾನೊಬ್ಬ ಕೈಗಾರಿಕೋದ್ಯಮಿಯಾಗಿದ್ದು, ವ್ಯಾಪಾರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ನನಗೆ ತಿಳಿದಿದೆ. ಸುಗಮ ಮತ್ತು ಶಾಂತಿಯುತ ವಾತಾವರಣದಲ್ಲಿ ವ್ಯವಹಾರ  ನಡೆಸಲು ಅವರಿಗೆ ನಾನು ಸಹಾಯ ಮಾಡುತ್ತೇನೆ. ಅವರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಯಾವುದೇ ಆತಂಕಗಳನ್ನು ನಿವಾರಿಸಲು ನಾನು ಸದಾಕಾಲ ಸಿದ್ಧರಿರುತ್ತೇವೆ. ಕರ್ನಾಟಕ ಯಾವಾಗಲೂ ಹೂಡಿಕೆದಾರ ಸ್ನೇಹಿ ರಾಜ್ಯವಾಗಿದ್ದು, ಹೀಗಾಗಿ ಹೂಡಿಕೆದಾರರು ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆಯನ್ನು ನೀಡುತ್ತೇನೆ.

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸರ್ಕಾರ ಸಿದ್ಧತೆಗಳ ನಡೆಸುತ್ತಿದ್ದು, ಈ ಸಂದರ್ಭದಲ್ಲಿಯೇ ರಾಜ್ಯದಲ್ಲಿ ವಿವಾದಗಳು ಭುಗಿಲೆದ್ದಿರುವುದು ಚಿಂತಿಗೊಳಗಾಗುವಂತೆ ಮಾಡಿದೆಯೇ?
ಖಂಡಿತವಾಗಿಯೂ ಇಲ್ಲ. ಈ ವಿವಾದಗಳು, ಸಮಸ್ಯೆಗಳು 2022ರ ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಾರಿಯ ಹೂಡಿಕೆದಾರರ ಸಮಾವೇಶ ದೊಡ್ಡ ಯಶಸ್ಸನ್ನು ಪಡೆಯಲಿದೆ. ರಾಜ್ಯವು ನಮ್ಮ ನಿರೀಕ್ಷೆಗಳನ್ನು ಮೀರಿ ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ಬೃಹತ್ ಸಂಖ್ಯೆಯ ಹೂಡಿಕೆಗಳನ್ನು, ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಸಮಸ್ಯೆಗಳು ಶೀಘ್ರದಲ್ಲಿಯೇ ದೂರಾಗಲಿದೆ. ಅಂತಿಮವಾಗಿ ಜನರು ಶಾಂತಿ, ಬೆಳವಣಿಗೆ ಮತ್ತು ಸಮೃದ್ಧಿಯನ್ನು ನೋಡಲಿದ್ದಾರೆ.

ಧ್ರುವೀಕರಣದ ರಾಜಕೀಯವು ರಾಜ್ಯದ ಸಂಸ್ಕೃತಿ, ಆರ್ಥಿಕತೆ ಮತ್ತು ಹೂಡಿಕೆ ನಿರೀಕ್ಷೆಗಳನ್ನು ನಾಶಪಡಿಸಲಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಕರ್ನಾಟಕದ ಭವಿಷ್ಯ ಮತ್ತು ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ. ಬಿಜೆಪಿಯಲ್ಲ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಧ್ರುವೀಕರಣದ ರಾಜಕೀಯದಲ್ಲಿ ತೊಡಗಿದೆ. ರಾಜಕೀಯ ಲಾಭಕ್ಕಾಗಿ ಆ ಪಕ್ಷಗಳು ಪ್ರಸ್ತುತದ ವಿವಾದಗಳಿಗೆ ಕೋಮು ಬಣ್ಣ ನೀಡಿ, ವಿಷಯವಲ್ಲದ ವಿಷಯಗಳನ್ನು ವಿಚಾರ ಮಾಡಿ, ಸತ್ಯಗಳನ್ನು ತಿರುಚುತ್ತಿದೆ. ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವೋಟ್ ಬ್ಯಾಂಕ್‌ಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಪಕ್ಷವನ್ನು ಕೋಮು ವಿವಾದದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕರ್ನಾಟಕದ ಜನರು ಬುದ್ಧಿವಂತರಾಗಿದ್ದು, ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ವಿಪಕ್ಷಗಳು ನಮ್ಮ ರಾಜ್ಯಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ವಿಪಕ್ಷಗಳು ನಮ್ಮ ವಿರೋಧಿಗಳಿಗೆ ಸಹಾಯ ಮಾಡಲು ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಬಿಟ್ಟು ರಾಜ್ಯದ ಬೆಳವಣಿಗೆಗೆ ಸರ್ಕಾರದೊಂದಿಗೆ ಕೈಜೋಡಿಸಬೇಕು.

ಉದ್ಯೋಗ ಸೃಷ್ಟಿಯು ಸರ್ಕಾರದ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಆ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ?
ಉದ್ಯೋಗವಿಲ್ಲದ ಬೆಳವಣಿಗೆ ಬೆಳವಣಿಗೆಯಲ್ಲ. ಯಾವುದೇ ಆರ್ಥಿಕತೆಯ ಬೆಳವಣಿಗೆಗೆ ಉದ್ಯೋಗ ಸೃಷ್ಟಿ ಪ್ರಮುಖವಾಗಿದೆ. ನಮ್ಮ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುವ ಹೂಡಿಕೆ ಪ್ರಸ್ತಾಪಗಳಿಗೆ ಆದ್ಯತೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ, ನಾವು ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ (SLSWCC) ಸಭೆಗಳ ಮೂಲಕ ಸಾವಿರಾರು ಕೋಟಿ ಮೌಲ್ಯದ ಹಲವಾರು ಹೂಡಿಕೆ ಪ್ರಸ್ತಾವನೆಗಳನ್ನು ತೆರವುಗೊಳಿಸಿದ್ದೇವೆ. ಈ ಹೂಡಿಕೆಗಳು ರಾಜ್ಯದಾದ್ಯಂತ ಬೃಹತ್ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ. ನಾವು ಅನೇಕ ಜಿಲ್ಲೆಗಳಲ್ಲಿ ಕ್ಲಸ್ಟರ್ ಆಧಾರಿತ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುತ್ತಿದ್ದೇವೆ, ಇದು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನಾವು ನಮ್ಮ ಯುವಕರಿಗೆ ಉದ್ಯೋಗ ಒದಗಿಸುವ ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತಿದ್ದೇವೆ.

ಕರ್ನಾಟಕದಿಂದ ಹೂಡಿಕೆದಾರರನ್ನು ಆಕರ್ಷಿಸಲು ತೆಲಂಗಾಣವು ಪರಿಣಾಮಕಾರಿ ರೀತಿಯಲ್ಲಿ ಪ್ರಯತ್ನಗಳ ನಡೆಸುತ್ತಿದೆ. ಇದನ್ನು ಕರ್ನಾಟಕ ಹೇಗೆ ಎದುರಿಸಲಿದೆ?
ಪ್ರತಿಯೊಂದು ರಾಜ್ಯವೂ ಹೂಡಿಕೆಗಳನ್ನು ಆಕರ್ಷಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಪ್ರಯತ್ನಿಸುವುದು ಸಹಜ. ಆದರೆ ಇದನ್ನು ಆರೋಗ್ಯಕರ ರೀತಿಯಲ್ಲಿ ನೋಡಬೇಕುಯ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳು ಇತರರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಇಲ್ಲಿ ಪ್ರಮುಖ ಅಂಶವೆಂದರೆ ಕರ್ನಾಟಕವು ದೇಶದ ಇತರ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ, ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ಭಾರತದಲ್ಲಿನ ಒಟ್ಟು ಎಫ್‌ಡಿಐಗಳಲ್ಲಿ ಶೇಕಡಾ 48 ರಷ್ಟು ಪಾಲನ್ನು ಹೊಂದಿರುವ ಕರ್ನಾಟಕವು ಈಗಾಗಲೇ ಅಗ್ರ ಹೂಡಿಕೆಯ ತಾಣವಾಗಿ ಹೊರಹೊಮ್ಮಿದೆ.

ದುಬೈ ಎಕ್ಸ್‌ಪೋ 2020 ರ ದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯು ಹೂಡಿಕೆದಾರರಿಂದ ಪಡೆದ ಪ್ರತಿಕ್ರಿಯೆಯು ಅಗಾಧವಾಗಿತ್ತು. ಇತರ ರಾಜ್ಯಗಳು ದೂರದ ಎರಡನೇ ಸ್ಥಾನಕ್ಕಾಗಿ ಹೋರಾಡಿತ್ತು. ನಾವು ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಮಾರ್ಪಟ್ಟಿದ್ದೇವೆ. ತೆಲಂಗಾಣವು ರಾಜ್ಯದ ಹೂಡಿಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದು, ರಾಜ್ಯದ ವಿವಾದಗಳನ್ನು ಪ್ರಸ್ತಾಪಿಸಿ ತಮ್ಮ ಕೇಂದ್ರಗಳನ್ನು ಬೆಂಗಳೂರಿನಿಂದ ಹೈದರಾಬಾದ್'ಗೆ ಸ್ಥಳಾಂತರಿಸುವಂತೆ ಕೇಳುತ್ತಿರುವುದನ್ನು ನೋಡುತ್ತಿದ್ದರೆ ಹಾಸ್ಯಸ್ಪದ ಎನಿಸುತ್ತಿದೆ.

ಬೆಂಗಳೂರು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿದೆ ಮತ್ತು ಭಾರತದ ಜಿಡಿಪಿಗೆ ಅಗ್ರ ಕೊಡುಗೆ ನೀಡುತ್ತದೆ. ಅದರ ಸ್ಥಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಮತ್ತು ಬೆಂಗಳೂರಿನ ದೃಢವಾದ ಪರಿಸರ ವ್ಯವಸ್ಥೆ ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ತೆಲಂಗಾಣವಾಗಲಿ ಅಥವಾ ಇನ್ನಾವುದೇ ರಾಜ್ಯವಾಗಲಿ ತಮ್ಮ ಬಲದ ಮೂಲಕ ಹೂಡಿಕೆದಾರರನ್ನು ಆಕರ್ಷಿಸಬೇಕು. ಹೂಡಿಕೆದಾರರ ಆಕರ್ಷಿಸಲು ಬೇರೆ ರಾಜ್ಯಗಳ ವರ್ಚಸ್ಸು ಹಾಳು ಮಾಡಬಾರದು.

ರಫ್ತು ಸನ್ನದ್ಧತೆಯ ಶ್ರೇಯಾಂಕದಲ್ಲಿ ಕರ್ನಾಟಕವು ನಂ.3 ಸ್ಥಾನದಲ್ಲಿದೆ, ರಾಜ್ಯವು ಉತ್ತಮ ವ್ಯಾಪಾರ ವಾತಾವರಣವನ್ನು ಒದಗಿಸುವುದರಿಂದ ಯಾವುದೇ ಹೂಡಿಕೆದಾರರು ಅಥವಾ ಉದ್ಯಮದಾರರು ರಾಜ್ಯದಿಂದ ಎಲ್ಲಿಗೂ ಹೋಗುವುದಿಲ್ಲ ಎಂದಿದ್ದಾರೆ.


Stay up to date on all the latest ರಾಜ್ಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp