ಜಿಲ್ಲೆಗೊಂದು ಇಎಸ್ಐ: ಕೇಂದ್ರಕ್ಕೆ ಸಚಿವ ಹೆಬ್ಬಾರ್ ಒತ್ತಾಯ
ರಾಜ್ಯದಯಲ್ಲಿ ಜಿಲ್ಲೆಗೊಂದು ಇಎಸ್ಐ ಆಸ್ಪತ್ರೆ ತೆರೆಯುವಂತೆ ಕೇಂದ್ರಕ್ಕೆ ಕೋರಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಸ್ವಜಿಲ್ಲೆಯ ಅಭಿವೃದ್ಧಿಗೆ ಸಂಬoಧಿಸಿದoತೆ ದಿಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರ ನೇತೃತ್ವದ ನಿಯೋಗವು ಸರತಿಯಂತೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಅಭಿವೃದ್ಧಿ...
Published: 11th April 2022 07:49 AM | Last Updated: 11th April 2022 01:42 PM | A+A A-

ಶಿವರಾಮ್ ಹೆಬ್ಬಾರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಂಗಳೂರು: ರಾಜ್ಯದಯಲ್ಲಿ ಜಿಲ್ಲೆಗೊಂದು ಇಎಸ್ಐ ಆಸ್ಪತ್ರೆ ತೆರೆಯುವಂತೆ ಕೇಂದ್ರಕ್ಕೆ ಕೋರಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಸ್ವಜಿಲ್ಲೆಯ ಅಭಿವೃದ್ಧಿಗೆ ಸಂಬoಧಿಸಿದoತೆ ದಿಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರ ನೇತೃತ್ವದ ನಿಯೋಗವು ಸರತಿಯಂತೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಅಭಿವೃದ್ಧಿ ಪರವಾದ ಚರ್ಚೆ- ಸಮಾಲೋಚನೆಗಳನ್ನು ನಡೆಸಿ ಕೇಂದ್ರದ ಅಗತ್ಯ ಸಹಕಾರ ಕೋರಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಇಎಸ್ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ ದೊರಕುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು ಮತ್ತು ಇಎಸ್ಐ ಆಸ್ಪತ್ರೆಗಳಲ್ಲಿ ‘ಆಯುಷ್’ ವಿಭಾಗಗಳನ್ನು ತೆರೆಯಬೇಕು, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದರಂತೆ ಇಎಸ್ಐ ಆಸ್ಪತ್ರೆಗಳನ್ನು ತೆರೆಯುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೋವಿಡ್ ಸಂದರ್ಭ ಸೇರಿದಂತೆ ಕಾರ್ಮಿಕ ಇಲಾಖೆ ಕಾರ್ಯವೈಖರಿ ಮತ್ತು ವಲಸೆ ಕಾರ್ಮಿಕರ ಕ್ಷೇಮಕ್ಕೆ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭೂಪೇಂದ್ರ ಯಾದವ್, ರಾಜ್ಯದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ಇರುವ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರಲ್ಲದೆ, ಕೂಡಲೇ ಸ್ಥಳಕ್ಕೆ ಇಎಸ್ಐಸಿ ಪ್ರಧಾನ ನಿರ್ದೇಶಕ ಬಾಟಿಯಾ ಅವರನ್ನು ಕರೆಸಿದರು. ಇಎಸ್ಐಸಿ ಅಧಿಕಾರಿಗಳೊಂದಿಗೆ ಇಎಸ್ಐ ಆಸ್ಪತ್ರೆಗಳ ಸುಧಾರಣೆಗಳ ಬಗ್ಗೆ ಚರ್ಚಿಸಿದ ಸಚಿವ ಹೆಬ್ಬಾರ್, ಪ್ರಾದೇಶಿಕ ಮಂಡಳಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: ಇಎಸ್ಐಸಿ ಕೋವಿಡ್-19 ಪರಿಹಾರ ಯೋಜನೆ
69 ಚಿಕಿತ್ಸಾಲಯಗಳಿಗೆ ಅನುಮತಿಗೆ ಕೋರಿಕೆ:
ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದ ವಿವಿಧೆಡೆಗಳಲ್ಲಿ 69 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ಕೋರಲಾಗಿದ್ದು, ಈ ಸಂಬಂಧ ಕೇಂದ್ರವು ಇದೀಗ 19ಕ್ಕೆ ಅನುಮತಿ ನೀಡಿದ್ದು, ಇನ್ನುಳಿದ 50 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ಮತ್ತು ಪ್ರತಿ ಜಿಲ್ಲೆಗೆ ಒಂದರಂತೆ ಇಎಸ್ಐ ಆಸ್ಪತ್ರೆಗಳನ್ನು ಆರಂಭಿಸಲು ಅನುಮೋದನೆ ಕೊಡಬೇಕು, ಪ್ರಸ್ತುತ ಇರುವ ಆಸ್ಪತ್ರೆಗಳಿಗೆ ಸಿಬ್ಬಂದಿ ಮತ್ತು ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ಸಶಕ್ತೀಕರಣಗೊಳಿಸಬೇಕೆಂಬ ಮನವಿಯನ್ನು ಇದೇ ವೇಳೆ ಕೇಂದ್ರಕ್ಕೆ ಸಲ್ಲಿಸಲಾಯಿತು.
ಜಿಲ್ಲೆಗಳಲ್ಲಿ ಇರುವ ಚಿಕಿತ್ಸಾಲಯಗಳನ್ನು ‘ಆರೋಗ್ಯ ಕಲ್ಯಾಣ ಕೇಂದ್ರ’ಗಳಾಗಿ ಪರಿವರ್ತಿಸಬೇಕು. ಈ ಕಲ್ಯಾಣ ಕೇಂದ್ರಗಳಲ್ಲಿ ಇಸಿಜಿ, ಮೈನರ್ ಓಟಿ, ಆಕ್ಸಿಜನ್ ಸೇವೆಗಳ ಜತೆಗೆ ಅಗತ್ಯ ವೈದ್ಯ ಸಿಬ್ಬಂದಿ ಒದಗಿಸಬೇಕು ಎಂದ ಸಚಿವ ಹೆಬ್ಬಾರ್, ಆ ಮೂಲಕ ಇತರೆ ಆಸ್ಪತ್ರೆಗಳಿಗೆ ಕಳುಹಿಸುವ ಪರಿಪಾಠವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಪ್ರಸ್ತುತ ಏಳು ಇಎಸ್ಐ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆಗಳಿಗೆ ಎಂ.ಐ.ಸಿ.ಯೂ (ಮೆಡಿಕಲ್ ಐಸಿಯು) ವ್ಯವಸ್ಥೆ ಮಾಡಬೇಕು ಮತ್ತು ರಾಜ್ಯದಲ್ಲಿರುವ ವಿಮಾ ಚಿಕಿತ್ಸಾಲಯಗಳಿಗೆ ಸಮರ್ಪಕ ಕಟ್ಟಡ ಇರುವುದಿಲ್ಲ ಹೀಗಾಗಿ ಈ ಚಿಕಿತ್ಸಾಲಯಗಳಿಗೆ ಆಧುನಿಕ ವ್ಯವಸ್ಥೆಗಳೊಂದಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮವಹಿಸುವಂತೆ ಕೇಂದ್ರ ಇಎಸ್ಐ ಅಧಿಕಾರಿಗಳನ್ನು ರಾಜ್ಯ ನಿಯೋಗ ಆಗ್ರಹಪಡಿಸಿತು.
ಇದನ್ನೂ ಓದಿ: ಪಾಳು ಬಿದ್ದಿದ್ದ ಶಹಬಾದ್ ಇಎಸ್ಐ ಆಸ್ಪತ್ರೆಗೆ ಆಧುನಿಕ ಸ್ಪರ್ಶ: ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ
ತೆರಿಗೆ ರಿಯಾಯ್ತಿಗೆ ಮನವಿ:
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸೆಸ್ ಸಂಗ್ರಹದ ಮೂಲಕ ಆರ್ಥಿಕ ಸಂಪನ್ಮೂಲ ಹೊಂದಿದ್ದು, ಈಗಾಗಲೇ ಇತರೆ ಮಂಡಳಿಗಳಾದ ಕಾಫಿ ಬೋರ್ಡ್, ತಂಬಾಕು ಮಂಡಳಿಗೆ ನೀಡಿರುವಂತೆ ಕಾರ್ಮಿಕ ಕಲ್ಯಾಣ ಮಂಡಳಿಗೂ ಸೆಸ್ ಮೇಲಿನ ತೆರಿಗೆಯಿಂದ ರಿಯಾಯ್ತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಯಿತು.
ಕಾರ್ಮಿಕ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಎಂ.ಪಿ.ಗುರುಪ್ರಸಾದ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ, ಮಂಡಳಿ ಜಂಟಿ ಕಾರ್ಯದರ್ಶಿ ಡಾ.ಶಿವಪುತ್ರ ಬಾಬುರಾವ್ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ನಿಯೋಗದಲ್ಲಿದ್ದರು.
ಹಾವೇರಿ ಎಂಬಿಬಿಎಸ್ ಅನುಮತಿಗೆ ಮನವಿ
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ ಶಿವರಾಂ ಹೆಬ್ಬಾರ್, ಹಾವೇರಿ ವೈದ್ಯಕೀಯ ಕಾಲೇಜಿಗೆ (ಲೆಟರ್ ಆಫ್ ರ್ಮಿಷನ್) ಎಂಬಿಬಿಎಸ್ ಆರಂಭಿಸಲು ಅನುಮತಿ ಕೊಡಿಸಿಕೊಡುವಂತೆ ಮನವಿ ಮಾಡಿದರು. ಈ ವೇಳೆ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡೋವಿಯಾ ಅವರಿಗೆ ಪತ್ರ ಬರೆದು ಸಚಿವ ಹೆಬ್ಬಾರ್ ಮನವಿಯನ್ನು ಪರಿಗಣಿಸುವಂತೆ ಮನವಿ ಮಾಡಿದರು.