
ಸಾಂದರ್ಭಿಕ ಚಿತ್ರ
ಕೊಡಗು: ಕೋಲಾ ಪೂಜೆ ವೇಳೆ ಸಂಭವಿಸಿದ ಗಲಾಟೆ ವೇಳೆ ಬಂದೂಕು ಮಾರ್ಧನಿಸಿದ್ದು, ಮೂವರಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ.
ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ಐದು ಕುಟುಂಬಸ್ಥರು ಸೇರಿ ನಡೆಸುವ ಕೋಲಾ ಪೂಜೆಯ ವೇಳೆ ಕುಟುಂಬಸ್ಥರ ನಡುವೆಯೇ ನಡೆದ ಗಲಾಟೆಯು, ಸೋಮವಾರ ಸಂಜೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರು ರಿವಾಲ್ವಾರ್ನಿಂದ ಗುಂಡು ಹಾರಿಸಿದ್ದಾರೆ. ಪರಿಣಾಮ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ 12 ವರ್ಷಗಳ ಬಳಿಕ ಗ್ರಾಮದಲ್ಲಿ ಈ ಕೋಲಾ ಪೂಜೆ ಆಯೋಜಿಸಲಾಗಿತ್ತು. ಪೂಜೆಯ ವೇಳೆ ನಡೆದ ಗಲಾಟೆಯಲ್ಲಿ ಕೆಲವರು ವೀರೇಶ್ ಎಂಬುವರ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ. ಆಗ ವೀರೇಶ್ ಹಾರಿಸಿದ ಗುಂಡೇಟಿಗೆ ಕುಟುಂಬದ ಮಹೇಶ್, ನಂದೀಶ್, ಚಂದ್ರಶೇಖರ್ ಎಂಬುವವರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹೇಶ್ ಅವರಿಗೆ ಸೊಂಟದ ಕೆಳಭಾಗಕ್ಕೆ ಗುಂಡೇಟು ತಗುಲಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಮತ್ತಿಬ್ಬರ ಕೈಗೆ ಗುಂಡೇಟು ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯ ಮೇಲೂ ಹಲ್ಲೆಯ ಗಾಯಗಳಾಗಿವೆ.
ಪ್ರಸ್ತುತ ಗುಂಡೇಟು ತಗುಲಿದ ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೇಗಾಯ್ತು ಗಲಾಟೆ
ಪೂಜೆ ವೇಳೆ ತೆರೆ ಕಟ್ಟುವ ಹಾಗೂ ಹಣದ ವಿಚಾರದಲ್ಲಿ ವೀರೇಶ್ ಮತ್ತಿತರ ನಡುವೆ ನಡುವೆ ಗಲಾಟೆ ನಡೆದಿದ್ದು, ಗಲಾಟೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ವೀರೇಶ್ ಮೇಲೆ ಹಲ್ಲೆಯಾಗಿದ್ದು, ಇದರಿಂದ ಕ್ರೋಧಗೊಂಡ ವಿರೇಶ್ ತಮ್ಮ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದು ಘಟನೆಗೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೀರೇಶ್ ಏಕಾಏಕಿ ರಿವಾಲ್ವರ್ನಿಂದ ಗುಂಡು ಹಾರಿಸಿದರು ಎಂದು ಗಾಯಾಳು ಚಂದ್ರಶೇಖರ್ ಆರೋಪಿಸಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.