ಬಿಟ್ಕಾಯಿನ್ ಹಗರಣದ ತನಿಖೆಗೆ ಎಫ್ಬಿಐನ ಯಾವುದೇ ತಂಡ ಭಾರತಕ್ಕೆ ಬಂದಿಲ್ಲ: ಸಿಬಿಐ
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಗೂ ಈಗಾಗಲೇ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿರುವ ಬಿಟ್ ಕಾಯಿನ್ ಪ್ರಕರಣದ ಕುರಿತು ತನಿಖೆ ನಡೆಸಲು ಅಮೆರಿಕಾದ ಕೇಂದ್ರೀಯ ತನಿಖಾ ದಳ ಎಫ್'ಬಿಐ ತಂಡವೊಂದು ಭಾರತಕ್ಕೆ ಬಂದಿದೆ ಎಂಬ ಮಾಧ್ಯಮಗಳ ವರದಿಯನ್ನು ಸಿಬಿಐ ನಿರಾಕರಿಸಿದೆ.
Published: 11th April 2022 10:20 AM | Last Updated: 11th April 2022 11:56 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಗೂ ಈಗಾಗಲೇ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿರುವ ಬಿಟ್ ಕಾಯಿನ್ ಪ್ರಕರಣದ ಕುರಿತು ತನಿಖೆ ನಡೆಸಲು ಅಮೆರಿಕಾದ ಕೇಂದ್ರೀಯ ತನಿಖಾ ದಳ ಎಫ್'ಬಿಐ ತಂಡವೊಂದು ಭಾರತಕ್ಕೆ ಬಂದಿದೆ ಎಂಬ ಮಾಧ್ಯಮಗಳ ವರದಿಯನ್ನು ಸಿಬಿಐ ನಿರಾಕರಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಫ್'ಬಿಐ, ಬಿಟ್ ಕಾಯಿನ್ ಕುರಿತು ತನಿಖೆ ನಡೆಸಲು ಎಫ್'ಬಿಐ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಿಲ್ಲ ಅಥವಾ ತನಿಖೆಗೆ ಅನುಮತಿ ಕೋರಿ ಎಫ್'ಬಿಐ ಈ ವರೆಗೆ ತನ್ನ ಬಳಿ ಯಾವುದೇ ಮನವಿಯನ್ನೂ ಮಾಡಿಲ್ಲ. ಹೀಗಾಗಿ ತನಿಖೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯಲ್ಲಿ 1 ಟ್ರಿಲಿಯನ್ ಡಾಲರ್ ನಷ್ಟ!
ಮಾಧ್ಯಮಗಳ ವರದಿ ಬೆನ್ನಲ್ಲೇ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಎಫ್'ಬಿಐ ಭಾರತಕ್ಕೆ ಬಂದಿದೆಯೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದರು. ಬಿಟ್-ಕಾಯಿನ್ ಹಗರಣಕ್ಕೆ ಸಂಬಂಧಿಸಿ ರಾಜ್ಯ ಪೊಲೀಸರು ನಡೆಸುತ್ತಿರುವ ತನಿಖೆಗಳಲ್ಲಿ ನ್ಯೂನತೆಗಳಿವೆ ಹಾಗೂ ಹಲವಾರು ಬಿಜೆಪಿ ನಾಯಕರು ಬಿಟ್-ಕಾಯಿನ್ ರೂಪದಲ್ಲಿ ಲಂಚ ಸ್ವೀಕರಿಸಿದ್ದಾರೆಂದು ರಾಜ್ಯದ ಕಾಂಗ್ರೆಸ್ ನಾಯಕರು ಆಪಾದಿಸಿದ್ದರು.
ಕಾಂಗ್ರೆಸ್ ನಾಯಕ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ಅವರು ಶುಕ್ರವಾರ ನೀಡಿ ಟ್ವಟ್ಟರ್ ಮೂಲಕ ಬಿಟ್-ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಲು ಅಮೆರಿಕದ ಎಫ್ಬಿಐ ತಂಡವು ದಿಲ್ಲಿಗೆ ಆಗಮಿಸಿದೆ ಎಂದ ಹೇಳಿಕೆ ನೀಡಿದ್ದರು. ‘‘ಈ ಹಗರಣದಲ್ಲಿ ಬಿಜೆಪಿಯ ಹಲವಾರು ಅಸ್ಥಿಪಂಜರಗಳು ಹೊರಬೀಳಲಿವೆ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಹ್ಯಾಕರ್ ಜೊತೆ ಪೊಲೀಸರು ಕೈಜೋಡಿಸಿಲ್ಲ, ಸರ್ಕಾರ ಯಾರನ್ನೂ ರಕ್ಷಿಸುತ್ತಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಇದಾದ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ರಣದೀಪ ಸುರ್ಜೆವಾಲಾ ಅವರು ಬಿಟ್-ಕಾಯಿನ್ ಹಗರಣಕ್ಕೆ ಸಂಬಂಧಿಸಿ ಅಮಿತ್ ಶಾ ಹಾಗೂ ಬೊಮ್ಮಾಯಿ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಇದರ ಬೆನ್ನಲ್ಲೇ ಸಿಬಿಐ ಸ್ಪಷ್ಟನೆ ನೀಡಿದೆ.