ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲು
ತಮ್ಮ ವಾಕ್ ಪ್ರಹಾರ, ವಿರೋಧ ಪಕ್ಷದ ನಾಯಕರ ವಿರುದ್ಧ ತೀವ್ರ ಟೀಕೆ, ವಾದ-ವಿವಾದಗಳಿಂದ ಆಗಾಗ ಸುದ್ದಿಯಾಗುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲಾಗಿದೆ.
Published: 13th April 2022 08:14 AM | Last Updated: 13th April 2022 01:21 PM | A+A A-

ಸಚಿವ ಕೆ ಎಸ್ ಈಶ್ವರಪ್ಪ
ಉಡುಪಿ: ತಮ್ಮ ವಾಕ್ ಪ್ರಹಾರ, ವಿರೋಧ ಪಕ್ಷದ ನಾಯಕರ ವಿರುದ್ಧ ತೀವ್ರ ಟೀಕೆ, ವಾದ-ವಿವಾದಗಳಿಂದ ಆಗಾಗ ಸುದ್ದಿಯಾಗುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಅದು ಬೆಳಗಾವಿ ಜಿಲ್ಲೆಯ ಹಿಂಡಲಗ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ. ಸಂತೋಷ್ ಪಾಟೀಲ್ ಗುತ್ತಿಗೆ ಕಾಮಗಾರಿಯೊಂದರಲ್ಲಿ ಸಚಿವ ಈಶ್ವರಪ್ಪ ವಿರುದ್ಧ 40% ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೆಲ ತಿಂಗಳ ಹಿಂದೆ ಸುದ್ದಿಯಾಗಿದ್ದರು. ಅವರ ಆರೋಪವನ್ನು ತಳ್ಳಿಹಾಕಿದ್ದ ಹಿರಿಯ ಸಚಿವ ಈಶ್ವರಪ್ಪ ಸಂತೋಷ್ ಪಾಟೀಲ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅದು ವಿಚಾರಣೆ ಹಂತದಲ್ಲಿರುವಾಗಲೇ ಸಂತೋಷ್ ಪಾಟೀಲ್ ನಿನ್ನೆ ಏಪ್ರಿಲ್ 12ರಂದು ಉಡುಪಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯಿರುವ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
Police who have cordoned off Hotel Shambavi in Udupi are waiting for the family members of Santhosh Patil to arrive before sending the dead body for post mortem at Manipal@XpressBengaluru pic.twitter.com/GJTZ68xYbo
— Prakash Samaga (@prakash_TNIE) April 12, 2022
ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂಬ ಸಂದೇಶವನ್ನು ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಪ್ (Whatsapp) ಮಾಡಿದ್ದರು. ಹೀಗಾಗಿ ಸಚಿವರಾದ ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಎಫ್ ಐ ಆರ್ (FIR) ದಾಖಲಿಸಬೇಕು ಎಂದು ಕಾಂಗ್ರೆಸ್ (Congress) ಆಗ್ರಹಿಸಿತ್ತು. ಇದಾದ ಮೇಲೆ ನಿನ್ನೆ ಮಧ್ಯಾಹ್ನ ನಂತರ ನಡೆದ ಬೆಳವಣಿಗೆಯಲ್ಲಿ ಸಂತೋಷ್ ಆತ್ಮಹತ್ಯೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೊದಲ ಆರೋಪಿ ಸ್ಥಾನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ಇದೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನಾನು ಕಾರಣ ಅಲ್ಲ, ನಾನು ತಪ್ಪು ಮಾಡಿಲ್ಲ, ನಾನ್ಯಾಕೆ ರಾಜೀನಾಮೆ ಕೊಡಲಿ: ಕೆ ಎಸ್ ಈಶ್ವರಪ್ಪ
ದಾಖಲಾದ ಎಫ್ಐಆರ್ ಬೆಳಗಾವಿ ಜಿಲ್ಲೆಯ ಹಳ್ಳಿಯಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಬಂದ ಹಣದಲ್ಲಿ 40% ಕಮಿಷನ್ ನ್ನು ಸಚಿವ ಈಶ್ವರಪ್ಪ ಕೇಳಿದ್ದರು ಎಂದು ಸಂತೋಷ್ ಪಾಟೀಲ್ ಮಾಡಿದ್ದ ಆರೋಪದ ಮೇಲೆ ದೂರು ದಾಖಲಾಗಿದೆ.
ಶಾಂಭವಿ ಲಾಡ್ಜ್ ಗೆ ಎಫ್ಎಸ್ಎಲ್ ತಂಡ: ಸಂತೋಷ್ ಪಾಟೀಲ್ ಮೃತದೇಹವಿರುವ ಉಡುಪಿಯ ಶಾಂಭವಿ ಲಾಡ್ಜ್ ಗೆ ಇದೀಗ ಮಂಗಳೂರಿನಿಂದ ಎಫ್ಎಸ್ಎಲ್ ತಂಡ ಬಂದಿದ್ದು, ಇಂದು ಮಧ್ಯಾಹ್ನ ನಂತರ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆಯಿದೆ.