ಅಪ್ಪ ಎಲ್ಲಿ ಎಂದು ಪಾಪು ಕೇಳುತ್ತಲೇ ಇದೆ: ಕಣ್ಣೀರಿಟ್ಟ ಸಂತೋಷ್ ಪಾಟೀಲ್ ಪತ್ನಿ
ನಮ್ಮ 3 ವರ್ಷದ ಮಗ ತನ್ನ ತಂದೆ ಎಲ್ಲಿ, ನಮ್ಮ ಜೊತೆಗಿಲ್ಲವೇಕೆ ಎಂದು ಕೇಳುತ್ತಲೇ ಇದ್ದಾನೆಂದು ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಜಯಶ್ರೀ ಪಾಟೀಲ್ ಅವರು ಕಣ್ಣೀರಿಡುತ್ತಿದ್ದಾರೆ.
Published: 14th April 2022 10:03 AM | Last Updated: 14th April 2022 01:17 PM | A+A A-

ಸಂತೋಷ್ ಪಾಟೀಲ್ ಪತ್ನಿ
ಬೆಳಗಾವಿ: ನಮ್ಮ 3 ವರ್ಷದ ಮಗ ತನ್ನ ತಂದೆ ಎಲ್ಲಿ, ನಮ್ಮ ಜೊತೆಗಿಲ್ಲವೇಕೆ ಎಂದು ಕೇಳುತ್ತಲೇ ಇದ್ದಾನೆಂದು ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಜಯಶ್ರೀ ಪಾಟೀಲ್ ಅವರು ಕಣ್ಣೀರಿಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಅವರು ಕೆಲ ವಾರಗಳ ಹಿಂದೆ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದರು.ಈಶ್ವರಪ್ಪನ ಕಡೆಯವರು ಶೇ. 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ ಬೆಳಗಾವಿಯಿಂದ ಉಡುಪಿಗೆ ಬಂದು ಸಂತೋಷ್ ಅವರು, ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರ ಮೊಬೈಲ್ನಿಂದ ಮಾಧ್ಯಮದವರಿಗೆ ವಾಟ್ಸಾಪ್ ಸಂದೇಶ ರವಾನೆಯಾಗಿದ್ದು, ಅದರಲ್ಲಿ ತಮ್ಮ ಸಾವಿಗೆ ಈಶ್ವರಪ್ಪ ಅವರೇ ಕಾರಣರಾಗುತ್ತಾರೆ ಎಂದು ಹೇಳಿದ್ದರು. ಈ ಪ್ರಕರಣ ಸಂಬಂಧ ಈಶ್ವರಪ್ಪ ವಿರುದ್ಧ ಇದೀಗ ಸಾಕಷ್ಟು ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ. ಈಶ್ವರಪ್ಪ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.
ಇದನ್ನೂ ಓದಿ: ವಿಷ ಸೇವನೆಯಿಂದ ಸಂತೋಷ್ ಪಾಟೀಲ್ ಸಾವು: ಐಜಿಪಿ
ಪತಿಯ ಆತ್ಮಹತ್ಯೆ ಕುರಿತು ಹೇಳಿಕೆ ನೀಡಿರುವ ಪತ್ನಿ ಜಯಶ್ರೀ ಪಾಟೀಲ್ ಅವರು, ಈಶ್ವರಪ್ಪ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಸಂತೋಷ್ ಪಾಟೀಲ್ ಅವರ ಮನೆಗೆ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದು, ಈ ವೇಳೆ ಮಾತನಾಡಿರುವ ಸಂತೋಷ್ ಅವರ ಪತ್ನಿ ಜಯಶ್ರೀ ಪಾಟೀಲ್ ಅವರು, ನಾನೀಗ ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ. ಈಶ್ವರಪ್ಪ ಅವರು ನನ್ನ ಕುಟುಂಬವನ್ನು ನಾಶ ಮಾಡಿದ್ದಾರೆ. ಇದೀಗ ನನ್ನ ಮಕ್ಕಳು ಅನಾಥರಾಗಿದ್ದಾರೆ. ಸರ್ಕಾರ ಹಾಗೂ ಸಚಿವ ಈಶ್ವರಪ್ಪ ಅವರೂ ರೂ.4 ಕೋಟಿ ಬಿಲ್ ಕ್ಲಿಯನ್ ಮಾಡದ ಹಿನ್ನೆಲೆಯಲ್ಲಿ ನನ್ನ ಪತಿ ಒತ್ತಡಕ್ಕೆ ಸಿಲುಕಿದ್ದರು ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಅನುಮತಿ ಪಡೆಯದೆಯೇ ಸಂತೋಷ್ ರಸ್ತೆಗಳ ಕೆಲಸಗಳನ್ನು ಪೂರ್ಣಗೊಳಿಸಿದ್ದ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಕಿಡಿಕಾರಿರುವ ಅವರು, ಸಚಿವರ ಹಾಗೂ ಅಧಿಕಾರಿಗಳ ಅನುಮತಿ ಇಲ್ಲದೆಯೇ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವೇ? ಹಿಂಡಲಗ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನೋಲ್ಕರ್ ಅವರೊಂದಿಗೆ ನನ್ನ ಪತಿ ಸಚಿವ ಈಶ್ವರಪ್ಪ ಅವರನ್ನು ಭೇಟಿ ಮಾಡಿ ರಸ್ತೆ ಕಾಮಗಾರಿ ಕೆಲಸಗಳ ಕುರಿತು ಮಾತುಕತೆ ನಡೆಸಿದ್ದರು. ಈ ಸಭೆಗಳ ಸಾಕಷ್ಟು ಫೋಟೋಗಳು ನಮ್ಮ ಬಳಿ ಇವೆ. ರಸ್ತೆ ಕೆಲಸಕ್ಕಾಗಿ ಪತಿಗೆ ನಾನೇ ನನ್ನ ಎರಡು ಚಿನ್ನದ ಸರ ಹಾಗೂ ನಾಲ್ಕು ಚಿನ್ನದ ಬಳೆಗಳನ್ನು ಕೊಟ್ಟಿದ್ದೆ. ಕೆಲಸಕ್ಕಾಗಿ ನಮ್ಮ ಬಳಿಯಿದ್ದ ಎಲ್ಲಾ ಹಣವನ್ನು ಕೊಟ್ಟಿದ್ದೇವೆಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಪ್ರಕರಣ ಬಗ್ಗೆ ಸಮಗ್ರ ತನಿಖೆಯಾಗಬೇಕು: ಸಚಿವ ಈಶ್ವರಪ್ಪ
ಸಂತೋಷ್ ಅವರ ತಾಯಿ ಮಾತನಾಡಿ, ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳಿಸಲು ನನ್ನ ಮಗ ಎಲ್ಲಾ ಮೂಲಗಳಿಂದಲೂ ಹಣ ಪಡೆದುಕೊಂಡಿದ್ದ. ನಮ್ಮಂತಹ ಕುಟುಂಬ ರಸ್ತೆ ಕಾಮಗಾರಿ ಕೆಲಸಕ್ಕೆ ಸ್ವಂತವಾಗಿ ರೂ,4 ಕೋಟಿ ಖರ್ಚು ಮಾಡಲು ಸಾಧ್ಯವೇ? ಹೀಗಾಗಿ ಸಿಕ್ಕ ಎಲ್ಲಾ ಮೂಲಗಳಿಂದಲೂ ನನ್ನ ಪುತ್ರ ಹಣ ಪಡೆದುಕೊಂಡಿದ್ದ. ತನ್ನ ಶ್ರಮಕ್ಕೆ ಪ್ರತಿಫಲ ಸಿಗದ್ದಕ್ಕೆ ನನ್ನ ಮಗ ತೀವ್ರವಾಗಿ ನೊಂದಿದ್ದ. ಅವರಿಗೆ ಮೋಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ.