ಸುಪ್ರೀಂ ಕೋರ್ಟ್ ಆದೇಶದಂತೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ: ಸಿಎಂ ಬೊಮ್ಮಾಯಿ
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್ ಕಾಯ್ದೆ) ತಿದ್ದುಪಡಿ ತರಲು ಸುಪ್ರೀಂಕೋರ್ಟ್ ಆದೇಶವಾಗಿದ್ದು, ಅದರಂತೆ ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.
Published: 15th April 2022 08:56 AM | Last Updated: 15th April 2022 01:22 PM | A+A A-

ಗುರುವಾರ ಬೆಂಗಳೂರಿನಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದರು.
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್ ಕಾಯ್ದೆ) ತಿದ್ದುಪಡಿ ತರಲು ಸುಪ್ರೀಂಕೋರ್ಟ್ ಆದೇಶವಾಗಿದ್ದು, ಅದರಂತೆ ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: ಕೊಳಗೇರಿ ಪ್ರದೇಶದ 60 ಫಲಾನುಭವಿಗಳಿಗೆ ಮನೆ ಹಸ್ತಾಂತರ ಪ್ರಕ್ರಿಯೆಗೆ ಸಿಎಂ ಬೊಮ್ಮಾಯಿ ಚಾಲನೆ
ಬಳಿಕ ಮಾತನಾಡಿದ ಅವರು, ಎಸ್'ಸಿ/ಎಸ್'ಟಿ ವರ್ಗಗಳಿಗೆ 75 ಯೂನಿಟ್ ಗಳ ವಿದ್ಯುಚ್ಛಕ್ತಿ ಉಚಿತವಾಗಿ ನೀಡಲು ಮತ್ತು ಭೂ ಒಡೆತನ ಯೋಜನೆಯಡಿ ರೂ.20 ಲಕ್ಷ ಧನಸಹಾಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ, 75 ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, 50 ಸಾವಿರ ಎಸ್'ಸಿ/ಎಸ್'ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಎಸ್'ಸಿ/ಎಸ್'ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕ ನೆರವಾಗುವಂತೆ ವಸತಿ ನಿಲಯಗಳ ಕ್ಲಸ್ಟರ್ ಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯಡಿ ಒಂದು ಸಾವಿರ ಕೊಠಡಿಗಳ ಬಹು ಮಹಡಿ ವಿದ್ಯಾರ್ಥಿ ನಿಲಯ ಸಮುಚ್ಚಯಗಳನ್ನು ರೂ.280 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ದುರ್ಬಲ ವರ್ಗಗಳ ಅಭ್ಯುದಯಕ್ಕೆ ಶಿಕ್ಷಣ, ಉದ್ಯೋಗ, ಸಬಲೀಕರಣ ಬದಲಾವಣೆಯ ಮೆಟ್ಟಿಲುಗಳಾಗಿವೆ. 100 ಅಂಬೇಡ್ಕರ್ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುವುದು. 10 ಸಾವಿರ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ನೀಡಲಾಗುತ್ತಿದ್ದ 50 ಸಾವಿರ ಮಿತಿಯ ಸಹಾಯಧನವನ್ನು ಒಂದು ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ. ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಈಶ್ವರಪ್ಪನವರು ಶೀಘ್ರವೇ ಆರೋಪಗಳಿಂದ ಮುಕ್ತರಾಗುತ್ತಾರೆ, ರಾಜೀನಾಮೆ ನೀಡಲು ಒತ್ತಡವಿರಲಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಅಂಬೇಡ್ಕರ್ ಸ್ಫೂರ್ತಿ ಸೌಧ’ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ವಿಧಾನಸೌಧ– ವಿಕಾಸಸೌಧದ ವ್ಯಾಪ್ತಿಯ ಪ್ರದೇಶದಲ್ಲಿ ರೂ. 52 ಕೋಟಿ ವೆಚ್ಚದಲ್ಲಿ ‘ಅಂಬೇಡ್ಕರ್ ಸ್ಫೂರ್ತಿ ಸೌಧ’ ಶೀಘ್ರ ತಲೆ ಎತ್ತಲಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಳ ಸಮುದಾಯಗಳಿಗೆ ಒದಗಿಸುವ ಕಚೇರಿಗಳು ಈ ಕಟ್ಟಡದಲ್ಲಿ ಇರಲಿವೆ. ‘ಸರ್ಕಾರದ ಪ್ರಾಮಾಣಿಕ ಪ್ರಯತ್ನ ಇಚ್ಛಾಶಕ್ತಿಯಿಂದ ಬದಲಾವಣೆಯ ಪರ್ವವನ್ನು ತರಲಾಗುವುದು. ಈ ಆಶಯಕ್ಕೆ ಅಂಬೇಡ್ಕರ್ ಅವರೇ ಸ್ಫೂರ್ತಿ’ ಎಂದು ಹೇಳಿದರು.