ಭಾರೀ ಮಳೆಗೆ ಹೈರಾಣದ ಬೆಂಗಳೂರು ಜನತೆ: ಹಲವು ಕಾರುಗಳಿಗೆ ಹಾನಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಬನಶಂಕರಿ ಮತ್ತು ಕತ್ರಿಗುಪ್ಪೆಯಲ್ಲಿ ಹಲವು ಕಾರುಗಳು ಜಖಂಗೊಂಡಿವೆ. ಕನಕಪುರ ರಸ್ತೆಯಲ್ಲೂ ಜಲಾವೃತವಾಗಿದ್ದು, ತಡರಾತ್ರಿಯವರೆಗೂ ಸಂಚಾರ ಸ್ಥಗಿತಗೊಂಡಿತ್ತು.
Published: 16th April 2022 12:32 PM | Last Updated: 16th April 2022 03:18 PM | A+A A-

ಬನಶಂಕರಿಯ ಕಾಮಕ್ಯ ಥಿಯೇಟರ್ ಬಳಿ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಬನಶಂಕರಿ ಮತ್ತು ಕತ್ರಿಗುಪ್ಪೆಯಲ್ಲಿ ಹಲವು ಕಾರುಗಳು ಜಖಂಗೊಂಡಿವೆ. ಕನಕಪುರ ರಸ್ತೆಯಲ್ಲೂ ಜಲಾವೃತವಾಗಿದ್ದು, ತಡರಾತ್ರಿಯವರೆಗೂ ಸಂಚಾರ ಸ್ಥಗಿತಗೊಂಡಿತ್ತು.
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಮಾಹಿತಿ ನೀಡಿರುವ ಪ್ರಕಾರ, ಹಾನಿಗೊಳಗಾದ ಕೆಲವು ವಾಹನಗಳ ಮಾಲೀಕರು ಕ್ಯಾಬ್ ಚಾಲಕರಾಗಿದ್ದು, ಅವರ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಹನುಮಂತನಗರದ ನಿವಾಸಿ ಸುಜಾತಾ ಎಂ ಮಾತನಾಡಿ, ನನ್ನ ಸಹೋದರ ಕ್ಯಾಬ್ ಚಾಲಕನಾಗಿದ್ದು, ಭಾರೀ ಮಳೆಯಿಂದಾಗಿ ಸಂಜೆಯವರೆಗೆ ವಿಮಾನ ನಿಲ್ದಾಣದಲ್ಲಿಯೇ ಇರುವಂತಾಗಿತ್ತು ಎಂದು ಹೇಳಿದ್ದಾರೆ.
ಕುಟುಂಬದ ಎಲ್ಲಾ ಸದಸ್ಯರು ರಾತ್ರಿ 9 ಗಂಟೆಗೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಸಿನಿಮಾ ನೋಡಿ ಹೊರಗೆ ಬಂದರೆ ಕಾರು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿತ್ತು. ಕಾರು ಸಂಪೂರ್ಣವಾಗಿ ನಾಶಗೊಂಡಿದ್ದರು. ನಮ್ಮ ಕಾರಿನ ಜೊತೆಗೆ ಹಲವು ಕಾರುಗಳು ಕೂಡ ನೀರಿನಲ್ಲಿ ತೇಲುತ್ತಿತ್ತು ಎಂದು ತಿಳಿಸಿದ್ದಾರೆ.
Photos ನೋಡಿ: ಬೆಂಗಳೂರಿನಲ್ಲಿ ಒಂದೇ ದಿನದ ಮಳೆ ಸೃಷ್ಟಿಸಿದ ಅವಾಂತರದ ಚಿತ್ರಗಳು
ಸಹೋದರ ಕ್ಯಾಬ್ ಚಾಲಕನಾಗಿದ್ದು, ಕಾರು ಮರಳಿ ಚಾಲನೆ ಮಾಡುವ ಸ್ಥಿತಿಗೆ ತರಲು ಕನಿಷ್ಠ 2 ವಾರಗಳಾದರೂ ಬೇಕಾಗುತ್ತದೆ. ಕಾರು ಓಡಿಸಿ ಬದುಕುತ್ತಿದ್ದ ನನ್ನ ತಮ್ಮನಿಗೆ ಕಾರು ರಿಪೇರಿಯಾಗುವವರೆಗೆ ಏನು ಮಾಡಬೇಕೆಂಬುದು ತಿಳಿಯದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಕ್ಯಾಬ್ ಚಾಲಕ ಗುರುಪ್ರಸಾದ್ ಮಾತನಾಡಿ, ಮಳೆಯಿಂದ ನನ್ನ ಕಾರು ಹಾನಿಗೊಳಗಾಗಿರುವುದು ನೆರೆಹೊರೆಯವರು ತಿಳಿಸಿದ ಬಳಿಕವೇ ತಿಳಿದಿತ್ತು. ಮರದ ಕೊಂಬೆಗಳು ನೆಲಕ್ಕುರಿಳಿತ್ತು. ಹೀಗಾಗಿ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದೆ. ಆದರೆ, 2 ಗಂಟೆಗಳ ನಂತರ ಸಿಬ್ಬಂದಿಗಳು ಸ್ಥಳಕ್ಕೆ ಬಂದಿದ್ದರು. ಅಷ್ಟರಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ್ದವು ಎಂದು ಹೇಳಿದ್ದಾರೆ.
ಈ ನಡುವೆ ವಾಹನಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ವಾಹನದ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಪೊಲೀಸರು ಬಿಬಿಎಂಪಿ ಹಾಗೂ ತುರ್ತು ಸೇವಾ ಸಿಬ್ಬಂದಿಗಳೊಂದಿಗೆ ನೀರು ತೆರವು ಹಾಗೂ ಇನ್ನಿತರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರ್ಯಮಗ್ನರಾಗಿದ್ದರು ಎಂದು ತಿಳಿದುಬಂದಿದೆ.