ಜಕ್ಕೂರು: ಲ್ಯಾಂಡಿಂಗ್ ವೇಳೆ ವಿಮಾನ ಪಲ್ಟಿ; ರನ್ ವೇ ಮೇಲಿನ ನಾಯಿಗಳ ಹಿಂಡು, ಪಕ್ಷಿಗಳೇ ಕಾರಣ ಎಂದ ತಜ್ಞರು!
ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಲ್ಲಿ ವಿಮಾನಯಾನದಲ್ಲಿ ನಿರತರಾಗಿದ್ದ ವಿಮಾನವೊಂದು ಭಾನುವಾರ ಸಂಜೆ ಅಪಘಾತಕ್ಕೀಡಾಗಿದ್ದು ಘಟನೆಯಲ್ಲಿ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
Published: 18th April 2022 03:21 PM | Last Updated: 18th April 2022 03:31 PM | A+A A-

ಪಲ್ಟಿಯಾದ ವಿಮಾನ
ಬೆಂಗಳೂರು: ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಲ್ಲಿ ವಿಮಾನಯಾನದಲ್ಲಿ ನಿರತರಾಗಿದ್ದ ವಿಮಾನವೊಂದು ಭಾನುವಾರ ಸಂಜೆ ಅಪಘಾತಕ್ಕೀಡಾಗಿದ್ದು ಘಟನೆಯಲ್ಲಿ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಲ್ಲಿ ಸ್ಥಳೀಯ ವಿಮಾನಯಾನದಲ್ಲಿ ನಿರತರಾಗಿದ್ದ ವಿಮಾನವೊಂದು ಭಾನುವಾರ ಸಂಜೆ ಲ್ಯಾಂಡಿಂಗ್ ವೇಳೆ ಪಲ್ಟಿಯಾಗಿದೆ. ವಿಮಾನದಲ್ಲಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಸ್ಪರ್ಧಾತ್ಮಕ ಸ್ಕೈಡೈವಿಂಗ್ ಚಾಂಪಿಯನ್ ಚೆರಿಲ್ ಆನ್ ಸ್ಟೆರ್ನ್ಸ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾಕ್ ಪೀಟ್ ನಲ್ಲಿದ್ದ ಪೈಲಟ್ ಕ್ಯಾಪ್ಟನ್ ಆಕಾಶ್ ಜೈಸ್ವಾಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲ್ಯಾಂಡಿಂಗ್ ಸಮಯದಲ್ಲಿ ರನ್ವೇಯಲ್ಲಿ ಪಕ್ಷಿಗಳು ಮತ್ತು ನಾಯಿಗಳ ಹಿಂಡು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸೆಸ್ನಾ 185 ವಿಮಾನವು (ವಿಟಿ - ಇಟಿಯು) ಅಗ್ನಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ್ದು, ಈ ಘಟನೆಯು ರನ್ವೇ ಸಂಖ್ಯೆ 08 ರಲ್ಲಿ ಸಂಜೆ 5.42 ಕ್ಕೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು: ಜಕ್ಕೂರು ಏರೋಡ್ರೋಮ್ ನಲ್ಲಿ ಉರುಳಿಬಿದ್ದ ತರಬೇತಿ ವಿಮಾನ, ಒಬ್ಬರಿಗೆ ಗಾಯ
ಇದು ಟೈಲ್ ವೀಲ್ ಏರ್ಕ್ರಾಫ್ಟ್ ಆಗಿದ್ದು ಅದು ರನ್ವೇಯಲ್ಲಿ ಎಡಕ್ಕೆ ತಿರುಗಿ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಟೆರ್ನ್ಸ್, ಯುಎಸ್ ಮೂಲದವರಾಗಿದ್ದು, ಕ್ಯಾಪ್ಟನ್ ಜೈಸ್ವಾಲ್ಗೆ ಆಕಾಶದಲ್ಲಿ ಡೈವಿಂಗ್ ಮಾದರಿಯನ್ನು ಮಾಡುವ ತಂತ್ರದ ಕುರಿತು ಮಾರ್ಗದರ್ಶನ ನೀಡುತ್ತಿದ್ದರು. ವಿಮಾನವು ಕೆಳಗಿಳಿದ ನಂತರ ಮತ್ತು ಹೊರಡುವ ಸಮಯದಲ್ಲಿ, ವಿಮಾನದಲ್ಲಿದ್ದವರು ರನ್ವೇಯಲ್ಲಿ ಪಕ್ಷಿಗಳ ಹಿಂಡು ಮತ್ತು ಕೆಲವು ನಾಯಿಗಳನ್ನು ಗಮನಿಸಿದರು. ನಂತರ ವಿಮಾನವು ಪೈಲಟ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ನಂತರ ಅವರಿಗೆ ಏನಾಯಿತು ಎಂದು ನೆನಪಿಲ್ಲ. ಕ್ಯಾಪ್ಟನ್ ಜೈಸ್ವಾಲ್ ತುಂಬಾ ಅನುಭವಿ ಪೈಲಟ್ ಆಗಿದ್ದರು ಎಂದು ಹೇಳಿದರು.
ಅಪಘಾತದಿಂದಾಗಿ ವಿಮಾನಕ್ಕೆ ವ್ಯಾಪಕ ಹಾನಿಯಾಗಿದೆ. ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತಂಡವು ಭಾನುವಾರದಿಂದ ತನಿಖೆ ನಡೆಸುತ್ತಿದೆ. ಸೋಮವಾರ ಮಧ್ಯಾಹ್ನ ಮತ್ತೊಂದು ತಂಡ ಅಪಘಾತದ ಪರಿಶೀಲನೆಗಾಗಿ ಸ್ಥಳಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.