ಮಲ್ಲೇಶ್ವರದಲ್ಲಿ 'ವಿದ್ಯಾರ್ಥಿ ಭವನ' ಆರಂಭ: ಹೊಟೇಲ್ ಮಾಲೀಕರು ಏನಂತಾರೆ?
ವಿದ್ಯಾರ್ಥಿ ಭವನ ಮಸಾಲೆ ದೋಸೆ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಐಟಿ ಸಿಟಿ, ಉದ್ಯಾನನಗರಿ ಬೆಂಗಳೂರಿನ ಮಂದಿಗೆ ಬಹಳ ಅಚ್ಚುಮೆಚ್ಚಿನ ಜಾಗ, ಗರಿಗರಿಯಾದ ಬಾಯಲ್ಲಿ ನೀರೂರಿಸುವ ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿ ಹತ್ತಿರ ಗಾಂಧಿ ಬಜಾರ್ ನಲ್ಲಿರುವ ದೋಸೆಯೆಂದರೆ ಎಲ್ಲರಿಗೂ ಬಹಳ ಇಷ್ಟ.
Published: 18th April 2022 01:40 PM | Last Updated: 18th April 2022 01:57 PM | A+A A-

ವಿದ್ಯಾರ್ಥಿ ಭವನ ಮಸಾಲೆ ದೋಸೆ
ಬೆಂಗಳೂರು: ವಿದ್ಯಾರ್ಥಿ ಭವನ ಮಸಾಲೆ ದೋಸೆ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಐಟಿ ಸಿಟಿ, ಉದ್ಯಾನನಗರಿ ಬೆಂಗಳೂರಿನ ಮಂದಿಗೆ ಬಹಳ ಅಚ್ಚುಮೆಚ್ಚಿನ ಜಾಗ, ಗರಿಗರಿಯಾದ ಬಾಯಲ್ಲಿ ನೀರೂರಿಸುವ ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿ ಹತ್ತಿರ ಗಾಂಧಿ ಬಜಾರ್ ನಲ್ಲಿರುವ ದೋಸೆಯೆಂದರೆ ಎಲ್ಲರಿಗೂ ಬಹಳ ಇಷ್ಟ.
ತನ್ನ 79 ವರ್ಷಗಳ ಇತಿಹಾಸದಲ್ಲಿ ಇದೀಗ ವಿದ್ಯಾರ್ಥಿ ಭವನ ಗಾಂಧಿ ಬಜಾರ್ ನಿಂದಾಚೆಗೂ ಗ್ರಾಹಕರ ಹತ್ತಿರವಾಗುತ್ತಿದೆ. ಅದು ಬೆಂಗಳೂರಿನ ಮತ್ತೊಂದು ಅಚ್ಚುಮೆಚ್ಚಿನ ಅಡ್ಡ ಮಲ್ಲೇಶ್ವರದಲ್ಲಿ.
ಮಲ್ಲೇಶ್ವರದಲ್ಲಿ ತಲೆಯೆತ್ತಲಿರುವ ವಿದ್ಯಾರ್ಥಿ ಭವನ ಶಾಖೆ ಹೊಟೇಲ್ ನಲ್ಲಿ ಮಸಾಲೆ ದೋಸೆಗೆ ಜೊತೆಗೆ ಇಡ್ಲಿ, ವಡೆ, ಖಾರಾ ಬಾತ್, ಪೂರಿ, ಕೇಸರಿ ಬಾತ್, ರವ ವಡೆ ಇನ್ನೂ ಹಲವು ತಿಂಡಿತಿನಿಸುಗಳು ದೊರಕಲಿದೆ. ಆದರೆ ಇಲ್ಲಿನ ಸ್ಟಾರ್ ಅಟ್ರಾಕ್ಷನ್ ಮಸಾಲೆ ದೋಸೆ.
ತಮ್ಮ ತೋಳಿನಲ್ಲಿ ವೈಟರ್ ಉದ್ದದ ಮೇಲಿನಿಂದ ಮೇಲೆ ಮಸಾಲೆ ದೋಸೆ ತಟ್ಟೆಯನ್ನು ಹಿಡಿದುಕೊಂಡು ಬಂದು ಕುಳಿತ ಗ್ರಾಹಕರಿಗೆ ತಿನ್ನಲು ನೋಡುವುದೇ ಒಂದು ಚೆಂದ. ವಾರದ ದಿನಗಳಲ್ಲಿ ಇಲ್ಲಿ 1250ರವರೆಗೆ ಮಸಾಲೆ ದೋಸೆ ಮಾರಾಟವಾದರೆ ವಾರಾಂತ್ಯಗಳಲ್ಲಿ 2 ಸಾವಿರದವರೆಗೂ ಹೋಗುತ್ತದೆ. ಬಿಸಿಬಿಸಿಯಾದ ಮಸಾಲೆ ದೋಸೆ ಮಧ್ಯೆ ಬೆಣ್ಣೆ ಹಾಕಿಕೊಡುತ್ತಾರೆ. ಪ್ರತಿದಿನ ಇಲ್ಲಿ 4 ಕೆಜಿ ಬೆಣ್ಣೆ ಉಪಯೋಗಿಸುತ್ತಾರಂತೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವಿದ್ಯಾರ್ಥಿ ಭವನದ ವ್ಯವಸ್ಥಾಪಕ ಸಹಭಾಗಿ ಅರುಣ್ ಅಡಿಗ, ಮಲ್ಲೇಶ್ವರದಲ್ಲಿ ಹೊಸ ಅವತಾರದಲ್ಲಿ ವಿದ್ಯಾರ್ಥಿ ಭವನ ತಲೆಯೆತ್ತಲಿದೆ. ಸಾಮಾನ್ಯವಾಗಿ ಬೆಂಗಳೂರಿಗರಿಗೆ ವಿದ್ಯಾರ್ಥಿ ಭವನ ಮಸಾಲೆ ದೋಸೆಯೆಂದರೆ ವಿಶೇಷ ಪ್ರೀತಿ. ಮಲ್ಲೇಶ್ವರ ಬ್ರಾಂಚ್ ನಲ್ಲಿ ಇನ್ನಷ್ಟು ವಿಶೇಷತೆ ತರುತ್ತೇವೆ. ಮೇ ಮೊದಲ ವಾರದಲ್ಲಿ ಇಲ್ಲಿ ಬರಲಿದೆ ಎನ್ನುತ್ತಾರೆ.
ವಿದ್ಯಾರ್ಥಿ ಭವನ ಇತಿಹಾಸ: ಬೆಂಗಳೂರು ದಕ್ಷಿಣದ ಗಾಂಧಿ ಬಜಾರ್ ನಲ್ಲಿ ವಿದ್ಯಾರ್ಥಿ ಭವನ ತಲೆಯೆತ್ತಿದ್ದು 1943ರಲ್ಲಿ. ವೆಂಕಟರಮಣ ಮತ್ತು ಪರಮೇಶ್ವರ ಎಂಬ ಸೋದರರು ಉಡುಪಿಯ ಕುಂದಾಪುರ ಮೂಲದವರು ಆರಂಭಿಸಿದ್ದರು. ಇದಕ್ಕೆ 1970ರಲ್ಲಿ ಕುಂದಾಪುರದ ರಾಮಕೃಷ್ಣ ಅಡಿಗ ಅವರು ಕೈಜೋಡಿಸಿದ್ದರು.
ನಂತರ ರಾಮಕೃಷ್ಣ ಅಡಿಗ ಅವರ ಮಗ ಅರುಣ್ ತಮ್ಮ ಎಂಜಿನಿಯರಿಂಗ್ ವೃತ್ತಿಯನ್ನು ತೊರೆದು ವಿದ್ಯಾರ್ಥಿ ಭವನವನ್ನು ನೋಡಿಕೊಳ್ಳಲು ಆರಂಭಿಸಿದರು. ಸೋಮವಾರದಿಂದ ಗುರುವಾರದವರೆಗೆ ಹೊಟೇಲ್ ಬೆಳಗ್ಗೆ 6.30ಕ್ಕೆ ತೆರೆದರೆ ಬೆಳಗ್ಗೆ 11.30ಕ್ಕೆ ಬಾಗಿಲು ಹಾಕುತ್ತದೆ. ನಂತರ ಅಪರಾಹ್ನ 2 ಗಂಟೆಗೆ ತೆರೆದು ರಾತ್ರಿ 8 ಗಂಟೆಗೆ ಮುಚ್ಚುತ್ತದೆ. ಶುಕ್ರವಾರ ರಜೆ. ವಾರಾಂತ್ಯಗಳಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನದವರೆಗೆ ಮತ್ತು ಮಧ್ಯಾಹ್ನ ನಂತರ 2.30ರಿಂದ ರಾತ್ರಿ 8 ಗಂಟೆಯವರೆಗೆ ಇರುತ್ತದೆ.
ಮಲ್ಲೇಶ್ವರದ ವಿದ್ಯಾರ್ಥಿ ಭವನದಲ್ಲಿ ಮಧ್ಯಾಹ್ನ ಊಟ ಕೂಡ ದೊರಕುತ್ತದೆ ಎಂಬ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ದೋಸೆ ಪ್ರಿಯರಿಂದ ಆನ್ ಲೈನ್ ನಲ್ಲಿ ಟಾಕ್ ವಾರ್ ಆರಂಭವಾಗಿದೆ. ಸಿಟಿಆರ್, ವೀಣಾ ಸ್ಟೋರ್ ನಂತೆ ಈಗಿರುವ ವಿದ್ಯಾರ್ಥಿ ಭವನಕ್ಕೆ ಮಲ್ಲೇಶ್ವರದ ವಿದ್ಯಾರ್ಥಿ ಭವನ ಪೈಪೋಟಿ ನೀಡಲಿದೆ ಎನ್ನುತ್ತಾರೆ.
ಇಲ್ಲಿ ಸ್ಪರ್ಧೆ, ಪೈಪೋಟಿಯ ಪ್ರಶ್ನೆ ಬರುವುದಿಲ್ಲ, ಹೊಟೇಲ್ ಆರಂಭವಾದ ನಂತರ ನಮ್ಮ ಉದ್ದೇಶ ಜನತೆಗೆ ಗೊತ್ತಾಗುತ್ತದೆ ಎನ್ನುತ್ತಾರೆ ಅರುಣ್ ಅಡಿಗ.ರಾಜ್ಯದ ಬೇರೆ ಕಡೆಗಳಲ್ಲಿ ಆರಂಭಿಸುವಂತೆ ಬೇಡಿಕೆಯಿದ್ದರೂ ಅವರಿಗೆ ವಿದ್ಯಾರ್ಥಿ ಭವನವನ್ನು ಬೇರೆ ಕಡೆಗಳಿಗೆ ವಿಸ್ತರಿಸುವ ಮನಸ್ಸು ಇಲ್ಲವಂತೆ.