ದರೋಡೆಗೆ ಯತ್ನ, ಏನೂ ಸಿಗದ್ದಕ್ಕೆ ಕೋಪ: ಅಪ್ರಾಪ್ತ ಬಾಲಕನಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು
ಯುವಕನನ್ನು ದರೋಡೆ ಮಾಡಲು ಬಂದ ಇಬ್ಬರು ದುಷ್ಕರ್ಮಿಗಳು ಬಳಿಕ ಏನೂ ಸಿಗದ್ದಕ್ಕೆ ಕೋಪಗೊಂಡು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ರಿಚ್ಮಂಡ್ ಟೌನ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
Published: 18th April 2022 09:49 AM | Last Updated: 18th April 2022 01:44 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಯುವಕನನ್ನು ದರೋಡೆ ಮಾಡಲು ಬಂದ ಇಬ್ಬರು ದುಷ್ಕರ್ಮಿಗಳು ಬಳಿಕ ಏನೂ ಸಿಗದ್ದಕ್ಕೆ ಕೋಪಗೊಂಡು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ರಿಚ್ಮಂಡ್ ಟೌನ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿರುವ ಬಾಲಕ ಶುಕ್ರವಾರ ರಾತ್ರಿ ತಿಂಡಿ ತರಲು ಕಾಲ್ನಡಿಗೆ ಮೂಲಕ ಹೊರಗೆ ಬಂದಿದ್ದಾನೆ. ಈ ವೇಳೆ ಇಬ್ಬರು ದರೋಡೆಕೋರರು ಬೈಕ್ ನಲ್ಲಿ ಬಂದಿದ್ದು, ತನ್ನ ಬಳಿಯಿರುವ ಬೆಲೆಬಾಳುವ ವಸ್ತುವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಬಾಲಕ ತನ್ನ ಬಳಿ ಏನೂ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಬಾಲಕನ ಬೇಜುಗಳನ್ನು ಪರಿಶೀಲನೆ ನಡೆಸಿದ ದುಷ್ಕರ್ಮಿಗಳಿಗೆ ಜೇಬಿನಲ್ಲಿ ಏನೂ ಸಿಕ್ಕಿಲ್ಲ. ಇದರಿಂದ ಕೋಪಗೊಂಡು ಚೂರಿಯಿಂದ ಇರಿದು, ಸ್ಥಳದಿಂದ ಪರಾರಿಯಾಗಿದ್ದಾರೆ.
ಬಳಿಕ ಬಾಲಕ ನಿಧಾನಗತಿಯಲ್ಲಿ ಮನೆಗೆ ತೆರಳಿದ್ದು, ನಡೆದ ಘಟನೆಯನ್ನು ಸಹೋದರಿಗೆ ತಿಳಿಸಿದ್ದಾನೆ. ನಂತರ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ ಬಳಿಕ ಅಲ್ಲಿನ ವೈದ್ಯರು ಬೌರಿಂಗ್ ಆಸ್ಪತ್ರೆಗೆ ಕೆರೆದುಕೊಂಡು ಹೋಗುವಂತೆ ತಿಳಿಸಿದ್ದು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕನಿಗೆ 36 ಹೊಲಿಗೆಗಳನ್ನು ಹಾಕಲಾಗಿದ್ದು, ಇದೀಗ ಬಾಲಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ ಬಳಿಕ ಬಾಲಕನ ಸಹೋದರಿ ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಸಿಸಿಟಿ ದೃಶ್ಯಾವಳಿಗಳಿಗಾಗಿ ಪರಿಶೀಲನೆ ಆರಂಭಿಸಿದ್ದಾರೆ. ಆದರೆ, ಬಾಲಕ ಸಾಗುತ್ತಿದ್ದ ದಾರಿಯಲ್ಲಿ ಯಾವುದೇ ಸಿಸಿಟಿವಿಗಳಿರದ ಕಾರಣ ಆರೋಪಿಗಳ ಕುರಿತು ಸುಳಿವುಗಳು ಪತ್ತೆಯಾಗಿಲ್ಲ.
ಬಾಲಕನ ಸಂಬಂಧಿ ಅಹ್ಮದ್ ಅಲಿ ಸ್ಥಳೀಯ ನಿವಾಸಿಯಾಗಿದ್ದು, ಸ್ಥಳದಲ್ಲಿ ಆಗಾಗ್ಗೆ ದರೋಡೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಗಸ್ತು ಪೊಲೀಸರ ನಿಯೋಜಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ಕೆಲವು ದುಷ್ಕರ್ಮಿಗಳ ಗುಂಪು ಖಾಸಗಿ ಕಾಲೇಜುಗಳ ಬಳಿ ಹೋಗಿ ವಿದ್ಯಾರ್ಥಿಗಳಿಂದ ಹಣಕ್ಕಾಗಿ ಬೇಡಿಕೆಯಿಡುತ್ತಿರುವ ಕುರಿತು ದೂರುಗಳು ದಾಖಲಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಕಿಡಿಗೇಡಿಗಳು ಅಪ್ರಾಪ್ತ ವಯಸ್ಸಿನವರಾಗಿದ್ದು, ಅವರಿಗೆ ಎಚ್ಚರಿಕೆಗಳನ್ನೂ ನೀಡಿದ್ದೇವೆಂದು ಹೇಳಿದ್ದಾರೆ.