ಪೊಲೀಸ್ ಠಾಣೆ ಮೇಲೆ ದಾಳಿ ಅಕ್ಷಮ್ಯ ಅಪರಾಧ; ವಿವರ ನೀಡಿದರೆ ಮಠಗಳಿಂದ ಕಮಿಷನ್ ಬೇಡಿಕೆ ಆರೋಪ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ
ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದು ಸಚಿವ ಸಂಪುಟ ಪುನಾರಚನೆ ಸಂಬಂಧ ವರಿಷ್ಠರು ದೆಹಲಿಗೆ ಬರುವಂತೆ ಸೂಚಿಸಿದಾಗ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 19th April 2022 11:31 AM | Last Updated: 19th April 2022 01:36 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದು ಸಚಿವ ಸಂಪುಟ ಪುನಾರಚನೆ ಸಂಬಂಧ ವರಿಷ್ಠರು ದೆಹಲಿಗೆ ಬರುವಂತೆ ಸೂಚಿಸಿದಾಗ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ನಡೆದ ಗಲಭೆ ಪ್ರಕರಣ ಸಂಬಂಧ ಈಗಾಗಲೇ ತೀವ್ರ ತನಿಖೆ ನಡೆಯುತ್ತಿದೆ. ಯಾರೇ ತಪ್ಪಿತಸ್ಥರಾದರೂ ಅವರಿಗೆ ಕಠಿಣವಾದ ಶಿಕ್ಷೆ ನೀಡಿಯೇ ನೀಡುತ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಇದ್ದು, ಇಂದು ಚಿಕ್ಕಮಗಳೂರಿನ ಶೃಂಗೇರಿ ಮತ್ತು ಹರಿಹರಪುರಕ್ಕೆ ಹೋಗುತ್ತಿದ್ದಾನೆ, ಅಲ್ಲಿಂದ ಶಿವಮೊಗ್ಗ ಪ್ರವಾಸ ಕೈಗೊಳ್ಳುತ್ತೇನೆ. ನಮ್ಮ ಪಕ್ಷದ ವಿವಿಧ ಸಂಘಟನಾ ಕಾರ್ಯಕ್ರಮಗಳಿವೆ, ನಾಳೆ ಗುಲ್ಬರ್ಗಕ್ಕೆ ಹೋಗಲಿದ್ದು ಅಲ್ಲಿ ಕೂಡ ವಿವಿಧ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ ಎಂದರು.
ನಂತರ ಮುಧೋಳದಲ್ಲಿ ಎರಡು ನೀರಾವರಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದೇನೆ ಎಂದರು. ಅವುಗಳನ್ನೆಲ್ಲ ಮುಗಿಸಿಕೊಂಡು ಬೆಂಗಳೂರಿಗೆ ಆಗಮಿಸುತ್ತೇನೆ ಎಂದರು.
ಇದನ್ನೂ ಓದಿ: ಸ್ವಾಮೀಜಿಗಳತ್ರನೇ ಲಂಚ ಕೇಳ್ತಾರೆ ಅಂದ್ರೆ ಎಂಥ ನಾಚಿಕೆಗೇಡಿನ ಸರ್ಕಾರ ಇದು: ಸಿದ್ದರಾಮಯ್ಯ ಕಿಡಿ
ಶ್ರೀಗಳು ವಿವರ ನೀಡಿದರೆ ಸಮಗ್ರ ತನಿಖೆ: ಬಾಳೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿಯವರು ರಾಜ್ಯಸರ್ಕಾರದಿಂದ ಮಠಗಳಿಗೆ ಹಣ ಬಿಡುಗಡೆ ಮಾಡಬೇಕೆಂದರೆ ಶೇಕಡಾ 30ರಷ್ಟು ಕಮಿಷನ್ ನೀಡಬೇಕೆಂದು ಕೇಳುತ್ತಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಶ್ರೀಗಳು ವಿವರ ನೀಡಿದರೆ ಸಮಗ್ರ ತನಿಖೆ ನಡೆಸಲಾಗುವುದು ಎಂದರು.
ದಿಂಗಾಲೇಶ್ವರ ಸ್ವಾಮೀಜಿಗಳು ತಮ್ಮ ಹೇಳಿಕೆಗಳನ್ನು ಪುಷ್ಟೀಕರಿಸುವ ವಿವರಗಳನ್ನು ನೀಡಿದರೆ ಸಮಗ್ರ ತನಿಖೆ ನಡೆಸಲಾಗುವುದು ಎಂದರು.
ಇದನ್ನೂ ಓದಿ: ಕೋಮು ಉದ್ವಿಗ್ನತೆಯ ನಡುವೆ ಸಿಎಂ ಬೊಮ್ಮಾಯಿಗೆ ಮೀಸಲಾತಿ ಬಿಸಿ: ಏ.21 ಅಂತಿಮ ಗಡುವು ಎಂದ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ ಪೂಜ್ಯ ದಾರ್ಶನಿಕರು, ಮಹಾತ್ಮರು. ಮಠದ ಮುಖ್ಯಸ್ಥರು ಕೇವಲ ಹೇಳಿಕೆ ನೀಡಿದರೆ ಸಾಲದು. ಯಾರು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ, ಯಾರಿಗೆ ಪಾವತಿಸಲಾಗಿದೆ, ಎಷ್ಟು ಪಾವತಿಸಲಾಗಿದೆ ಮತ್ತು ಸಂಬಂಧಿಸಿದ ಎಲ್ಲಾ ವಿವರಗಳನ್ನು ಅವರು ನೀಡಿದರೆ, ಸಂಪೂರ್ಣ ತನಿಖೆ ಮಾಡಲಾಗುತ್ತದೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ನಡುವೆ ಕಾಂಗ್ರೆಸ್ ನಿಂದ ಶೇ.40ರಷ್ಟು ಆರೋಪ ಕೇಳಿ ಬಂದ ಬೆನ್ನಲ್ಲೇ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಹೊರಬಿದ್ದಿದ್ದು, ಗುತ್ತಿಗೆದಾರರ ಸಂಘದಿಂದ ಹೇಳಿಕೆ ಬಂದಿದೆ.
ಇದನ್ನೂ ಓದಿ: ಮಠದಿಂದಲೂ 30 ಪರ್ಸೆಂಟ್ ಕಮಿಷನ್: ತಾವು ಅನುದಾನ ಪಡೆಯಲ್ಲ ಎಂದ ಜಯಮೃತ್ಯುಂಜಯ ಸ್ವಾಮೀಜಿ
ಆಡಳಿತಾರೂಢ ಬಿಜೆಪಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುವುದಷ್ಟೇ ಅಲ್ಲ, ಧಾರ್ಮಿಕ ಶ್ರದ್ಧಾಳುಗಳಿಂದ ಶೇ.35ರಷ್ಟು ಕಮಿಷನ್ ಪಡೆಯುತ್ತದೆ. ಭ್ರಷ್ಟಾಚಾರ ಈ ಮಟ್ಟಕ್ಕೆ ಬಂದಿದೆ. ಕಮಿಷನ್ ಕೊಡುವವರೆಗೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂಬ ತೀವ್ರ ಸಂಚಲನ ಹುಟ್ಟಿಸುವ ಹೇಳಿಕೆಯನ್ನು ಬಾಗಲಕೋಟೆ ಜಿಲ್ಲೆಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸೋಮವಾರ ಶ್ರೀಗಳು ಹೇಳಿದ್ದರು.
ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳಿಗೆ, ಹಣ, ಅನುದಾನ ಎಂದರೆ ಐಸ್ ಕ್ರೀಮ್ ನಂತೆ. ಆದರೆ ಅವು ಉತ್ತರ ಕರ್ನಾಟಕವನ್ನು ತಲುಪುವ ಹೊತ್ತಿಗೆ ನಮಗೆ ಐಸ್ ಕ್ರೀಮ್ ತುಂಡುಗಳು ಮಾತ್ರ ಸಿಗುತ್ತವೆ ಎಂದು ಸ್ವಾಮೀಜಿ ಹೇಳಿದರು.
ಗುತ್ತಿಗೆದಾರರ ಸಾವಿನ ಪ್ರಕರಣದಲ್ಲಿ ಶಾಸಕ ಕೆಎಸ್ ಈಶ್ವರಪ್ಪ ಅವರ ಕೈವಾಡವಿದೆ ಎಂಬ ಆರೋಪದ ಮಧ್ಯೆ ಬಿಜೆಪಿ ಸರ್ಕಾರ ಟೀಕೆಗಳನ್ನು ಎದುರಿಸುತ್ತಿರುವ ನಡುವೆಯೇ ಶ್ರೀಗಳ ಈ ಹೇಳಿಕೆ ಹೊರಬಿದ್ದಿದೆ.