ಬೆಂಗಳೂರು: ಎಚ್ಐವಿ ಸೋಂಕಿತ ಮಹಿಳೆಗೆ ಸ್ನೇಹಿತನಿಂದ ಬೆದರಿಕೆ, ಸುಲಿಗೆ; ಎಫ್ಐಆರ್ ದಾಖಲು
ತನ್ನ ಮಹಿಳಾ ಸ್ನೇಹಿತೆಯ ಎಚ್ಐವಿ ಪಾಸಿಟಿವ್ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಬ್ಲಾಕ್ಮೇಲ್ ಮಾಡಿ ಆಕೆಯಿಂದ ಹಣ ವಸೂಲಿ ಮಾಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ...
Published: 19th April 2022 03:25 PM | Last Updated: 19th April 2022 03:25 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ತನ್ನ ಮಹಿಳಾ ಸ್ನೇಹಿತೆಯ ಎಚ್ಐವಿ ಪಾಸಿಟಿವ್ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಬ್ಲಾಕ್ಮೇಲ್ ಮಾಡಿ ಆಕೆಯಿಂದ ಹಣ ವಸೂಲಿ ಮಾಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ 42 ವರ್ಷದ ಸಂತ್ರಸ್ತೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಕೆ. ಅರುಣ್ ಕುಮಾರ್ಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನು ಓದಿ: ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್ ಅಧಿಕಾರಿಣಿ ಸಾವು, ಅನಾಥವಾದ ಮಗು!
ಪೊಲೀಸರ ಪ್ರಕಾರ, ಸಾಮಾಜಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುವಾಗ ಆರೋಪಿ ಸಂತ್ರಸ್ತೆ ಮಹಿಳೆಗೆ ಪರಿಚಯವಾಗಿದ್ದು, ನಂತರ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಸಂತ್ರಸ್ತೆ ತನಗೆ ಎಚ್ಐವಿ ಇರುವ ವಿಚಾರವನ್ನು ಆತನೊಂದಿಗೆ ಹಂಚಿಕೊಂಡ ನಂತರ ಆರೋಪಿಯು ಹಣಕ್ಕಾಗಿ ಬೇಡಿಕೆಯಿಡಲು ಆರಂಭಿಸಿದ್ದ. ಅರುಣ್ ಕುಮಾರ್ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿ ಆಕೆಯ 2.8 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನೂ ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ಮಹಿಳೆಗೆ ಎಚ್ಐವಿ ಇರುವ ಬಗ್ಗೆ ಆಕೆಯ ನಿಕಟ ಸಂಬಂಧಿಗಳಿಗೆ ತಿಳಿಸಿದ್ದು, ತೀವ್ರ ಮಾನಸಿಕ ಆಘಾತವನ್ನುಂಟು ಮಾಡಿದೆ. ಇದನ್ನು ಪ್ರಶ್ನಿಸಿದಾಗ ಆತ ನನ್ನ ಮನೆಗೆ ನುಗ್ಗಿ ಥಳಿಸಿದ್ದಾನೆ. ಅಲ್ಲದೆ ತನ್ನ ಮಗಳ ಮೇಲೂ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.