ರಸ್ತೆ ಕಾಮಗಾರಿ ಮುಗಿಸಲು ಸಂತೋಷ್ ಪಾಟೀಲ್ ಸಬ್ ಕಾಂಟ್ರಾಕ್ಟ್ ನೀಡಿದ್ದರು: ಬೆಳಗಾವಿ ಗುತ್ತಿಗೆದಾರರು!
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
Published: 19th April 2022 09:45 AM | Last Updated: 19th April 2022 01:29 PM | A+A A-

ಸಂತೋಷ್ ಪಾಟೀಲ್
ಬೆಳಗಾವಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕೀಯ ಕಿತ್ತಾಟಕ್ಕೆ ಸಂತೋಷ್ ಬಲಿಯಾದರೇ ಎಂಬ ವಿಚಾರವೂ ಚರ್ಚೆಯಾಗುತ್ತಿದೆ.
ಸಂತೋಷ ಪಾಟೀಲ್ನಿಂದ ಉಪಗುತ್ತಿಗೆ ಪಡೆದ ಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಭೇಟಿಯಾದ ಅಂಶವನ್ನೂ ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಈಚೆಗೆ ಉಪಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು.
ಉಡುಪಿ ಪೊಲೀಸರ ವಿಚಾರಣೆಗೆ ಹಾಜರಾಗದ ಇವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ ಹಲವು ಕಾಮಗಾರಿಗಳನ್ನು ಮಾಡಿಸಿದ್ದರು.
ಕಾಮಗಾರಿ ಮಂಜೂರಾತಿ ಪಡೆಯುವ ವೇಳೆ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಲೆಟರ್ ಹೆಡ್ ಮೂಲಕವೇ ಮೃತ ಸಂತೋಷ್ ಪಾಟೀಲ ಕಾಮಗಾರಿಯ ವಿವರಗಳನ್ನು ಈಶ್ವರಪ್ಪ ಅವರಿಗೆ ಒದಗಿಸಿ, ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಮೌಖಿಕ ಸೂಚನೆ ಮೇರೆಗೆ 4.12 ರು. ಕೋಟಿ ವೆಚ್ಚದಲ್ಲಿ 108 ಕಾಮಗಾರಿ ಮಾಡಿಸಿದ್ದೇನೆ ಎಂದು ಸಂತೋಷ ಪಾಟೀಲ್ ಹೇಳಿದ್ದರು.
ಕಾಮಗಾರಿ ನಿರ್ವಹಿಸಲು 12 ಉಪಗುತ್ತಿಗೆದಾರರಿಗೆ ಕೆಲಸ ಹಂಚಿದ್ದರು. ಸಂತೋಷ ಪಾಟೀಲ್ ಮತ್ತು ಗ್ರಾಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹೇಳಿದ್ದಕ್ಕೆ ಕೆಲಸ ಮಾಡಿದೆವು ಎಂದು ಇಂದಿಗೂ ಉಪಗುತ್ತಿಗೆದಾರರು ಹೇಳುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೂ ತಾರದೆ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ. ಕಾಮಗಾರಿ ಬಳಿಕ ಬಿಲ್ ಮಂಜೂರಾತಿಯಲ್ಲಿ ರಾಜಕೀಯ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಪಾಟೀಲ್ ಮತ್ತು ಮನ್ನೋಳ್ಕರ್ ಅವರಿಂದ ಹಣ ಪಾವತಿಯಾಗುವ ಭರವಸೆ ನೀಡಿದ ನಂತರವೇ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ ಎಂದು ಜಾಧವ್ ಹಾಗೂ ಇತರೆ ಗುತ್ತಿಗೆದಾರರು ತಿಳಿಸಿದ್ದಾರೆ. "ಇಬ್ಬರು ತಮ್ಮ ಬಳಿ ಕೆಲಸದ ಆದೇಶಗಳಿವೆ ಎಂದು ಹೇಳಿದರು" ಎಂದು ಜಾಧವ್ ತಿಳಿಸಿದ್ದಾರೆ. 100 ವರ್ಷಗಳ ನಂತರ ಆಚರಿಸುತ್ತಿರುವ ಹಿಂಡಲಗಾ ಲಕ್ಷ್ಮೀ ಜಾತ್ರೆ ಆರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಮನ್ನೋಳ್ಕರ್ ಮತ್ತು ಪಾಟೀಲ ಈ ಉಪಗುತ್ತಿಗೆದಾರರನ್ನು ಒತ್ತಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ನಾವು ನಮ್ಮ ಹಣವನ್ನು ರಸ್ತೆ ಕಾಮಗಾರಿಗೆ ಹೂಡಿಕೆ ಮಾಡಿದ್ದೇವೆ ಮತ್ತು ಪಾಟೀಲ್ ಬಿಲ್ಗಳನ್ನು ಕ್ಲಿಯರ್ ಮಾಡಬೇಕಿತ್ತು. ಪಾಟೀಲ್ ಅವರು ಯೋಜನೆಗೆ ಎಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ ಅಥವಾ ಸಾಲವಾಗಿ ಪಡೆದಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ನಮ್ಮ ಬಾಕಿಯನ್ನು ತೀರಿಸಲು ಅವರು ಒತ್ತಡಕ್ಕೆ ಒಳಗಾಗಿರಬಹುದು ಮತ್ತು ಅದಕ್ಕಾಗಿಯೇ ಅವರು ದೊಡ್ಡ ಮೊತ್ತವನ್ನು ನೀಡಬೇಕೆಂದು ಅವರು ಹೇಳಿರಬಹುದು ಎಂದು ಅವರು ಹೇಳಿದರು. ಪಾಟೀಲ್ ಅವರಿಂದ ಶೇ.40ರಷ್ಟು ಕಮಿಷನ್ ಕೇಳಲಾಗುತ್ತಿದೆಯೇ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಜಾಧವ್ ಹೇಳಿದ್ದಾರೆ.