ಬೆಂಗಳೂರು: 'ನೀಲಿ ಚಿತ್ರ' ದಲ್ಲಿ ನಟಿಸಿದ್ದಾಳೆಂಬ ಅನುಮಾನ; ಮಕ್ಕಳ ಮುಂದೆಯೇ ಪತ್ನಿಯ ಹತ್ಯೆಗೈದ ಪಾಪಿ!
ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಪಾಪಿ ಪತಿಯೊಬ್ಬ ತಾನು ವೀಕ್ಷಿಸಿದ ನೀಲಿ ಚಿತ್ರವೊಂದರಲ್ಲಿ ಪತ್ನಿ ಹೋಲಿಕೆ ಇರುವವಳೊಬ್ಬಾಕೆಯನ್ನು ಕಂಡು ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಮಕ್ಕಳ ಮುಂದೆಯೇ ಆಕೆಯನ್ನು ಇರಿದು ಕೊಂದಿರುವ ಘಟನೆ ನಡೆದಿದೆ.
Published: 19th April 2022 11:21 AM | Last Updated: 19th April 2022 01:33 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಪಾಪಿ ಪತಿಯೊಬ್ಬ ತಾನು ವೀಕ್ಷಿಸಿದ ನೀಲಿ ಚಿತ್ರವೊಂದರಲ್ಲಿ ಪತ್ನಿ ಹೋಲಿಕೆ ಇರುವವಳೊಬ್ಬಾಕೆಯನ್ನು ಕಂಡು ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಮಕ್ಕಳ ಮುಂದೆಯೇ ಆಕೆಯನ್ನು ಇರಿದು ಕೊಂದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಆಟೋರಿಕ್ಷಾ ಚಾಲಕ 40 ವರ್ಷದ ಜಹೀರ್ ಪಾಷಾ, ತನ್ನ ಪತ್ನಿ 35 ವರ್ಷದ ಮುಬೀನಾಳನ್ನು ಭಾನುವಾರದಂದು ತನ್ನ ಮಕ್ಕಳ ಮುಂದೆಯೇ ಇರಿದು ಕೊಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹದಿನೈದು ವರ್ಷಗಳ ಹಿಂದೆ ಮುಬೀನಾಳನ್ನು ವಿವಾಹವಾಗಿದ್ದ ಜಹೀರ್ ಪಾಷಾ, ಆಕೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
2 ತಿಂಗಳ ಹಿಂದೆ ಜಹೀರ್ ಪಾಷಾ ನೀಲಿ ಚಿತ್ರವೊಂದನ್ನು ವೀಕ್ಷಿಸಿದ್ದು, ಅದರಲ್ಲಿ ಮುಬೀನಾ ಹೋಲಿಕೆ ಇದ್ದವಳು ನಟಿಸಿದ್ದಾಳೆನ್ನಲಾಗಿದೆ. ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಜಹೀರ್ ಪಾಷಾ ಕುಟುಂಬದ ಸಮಾರಂಭ ನಡೆಯುತ್ತಿದ್ದ ವೇಳೆ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ 20 ದಿನಗಳ ಹಿಂದೆ ಮುಬೀನಾಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಆ ಸಂದರ್ಭದಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಮುಬೀನಾಳ ತಂದೆ ಗೌಸ್ ಪಾಷಾ ಪೊಲೀಸರಿಗೆ ದೂರು ನೀಡಲು ಮುಂದಾದರೂ ಸಹ ಆಕೆಯೇ ತಂದೆಯನ್ನು ತಡೆದಿದ್ದಳು ಎನ್ನಲಾಗಿದೆ. ಭಾನುವಾರ ಪತಿ-ಪತ್ನಿ ನಡುವೆ ಮತ್ತೆ ಜಗಳ ಶುರುವಾಗಿದ್ದು ಈ ವೇಳೆ ಜಹೀರ್ ಪಾಷಾ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದನ್ನು ನೋಡಿ ಭಯಭೀತನಾದ ಆತನ ಮಗ ಸಮೀಪದಲ್ಲೇ ಇದ್ದ ಅಜ್ಜನ ಮನೆಗೆ ಹೋಗಿ ಮಾಹಿತಿ ನೀಡಿದ್ದಾನೆ.