ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಸಿಐಡಿ ತನಿಖೆ ಚುರುಕು, ಇಂದು ಮತ್ತಷ್ಟು ಆರೋಪಿಗಳ ವಿಚಾರಣೆ
ಕಳೆದ ವರ್ಷ ಅಕ್ಟೋಬರ್ 3 ರಂದು ಕಲಬುರಗಿಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪಿಎಸ್ಐ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (CID) ತನಿಖೆಯನ್ನು ಚುರುಕುಗೊಳಿಸಿದೆ.
Published: 20th April 2022 09:51 AM | Last Updated: 20th April 2022 01:25 PM | A+A A-

ಸಾಂದರ್ಭಿಕ ಚಿತ್ರ
ಕಲಬುರಗಿ: ಕಳೆದ ವರ್ಷ ಅಕ್ಟೋಬರ್ 3 ರಂದು ಕಲಬುರಗಿಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪಿಎಸ್ಐ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (CID) ತನಿಖೆಯನ್ನು ಚುರುಕುಗೊಳಿಸಿದೆ.
ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, 545 ಪಿಎಸ್ಐ(PSI) ಹುದ್ದೆಗಳ ನೇಮಕಾತಿಗಾಗಿ CET ಫಲಿತಾಂಶಗಳನ್ನು ಪ್ರಕಟಿಸಿ ನಂತರ ವಿವಾದ ಎದ್ದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆಹಿಡಿಯಲಾಯಿತು. ಜನವರಿಯಲ್ಲಿ ಬರಬೇಕಿದ್ದ 402 ಪಿಎಸ್ಐ (ಸಿವಿಲ್) ಹುದ್ದೆಗಳ ಸಿಇಟಿಯನ್ನು ತಡೆಹಿಡಿಯಲಾಗಿದೆ, ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
ಸಿಐಡಿ ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಕಲಬುರಗಿಯ ಜ್ಞಾನ ಗಂಗಾ ಪರೀಕ್ಷಾ ಕೇಂದ್ರದಲ್ಲಿ ಉತ್ತರ ಪತ್ರಿಕೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಕೆಲವು ಸಾಕ್ಷ್ಯಾಧಾರಗಳು ಸಿಕ್ಕಿವೆ. ಮತ್ತೊಂದು ಸಿಐಡಿ ತಂಡವು ಪರೀಕ್ಷೆಯಲ್ಲಿ ಆಯ್ಕೆಯಾದ ಎಲ್ಲಾ 545 ಯಶಸ್ವಿ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿ ಬುಧವಾರದಂದು ತನಿಖೆಗೆ ಹಾಜರಾಗುವಂತೆ ಹೇಳಿದೆ. ಅವ್ಯವಹಾರ ಕಂಡುಬಂದಾಗಿನಿಂದ ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಇದುವರೆಗೆ ಬಂಧಿಸಿರುವ ಸಿಐಡಿ ಸಿಬ್ಬಂದಿ, ಇಂದು ಅವರ ಪೊಲೀಸ್ ಕಸ್ಟಡಿ ಅಂತ್ಯಗೊಳ್ಳುತ್ತಿದ್ದಂತೆ ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಿದೆ. ಆರೋಪಿಗಳನ್ನು ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಮಾತ್ರ ವಿಚಾರಣೆ ನಡೆಸಲು ನ್ಯಾಯಾಲಯ ತನಿಖಾಧಿಕಾರಿಗಳಿಗೆ ಅವಕಾಶ ನೀಡಿದೆ. ಜ್ಞಾನ ಗಂಗಾ ಸಂಸ್ಥೆಗಳ ಉದ್ಯೋಗಿಗಳಾಗಿದ್ದು ಪರೀಕ್ಷೆ ವೇಳೆ ಮೇಲ್ವಿಚಾರಕರಾಗಿದ್ದ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿ ಎಂಬ ಮೂವರು ಆರೋಪಿಗಳ ವಿಚಾರಣೆಯನ್ನು ಸಿಐಡಿ ಮುಗಿಸಿದೆ.
ಕಲಬುರಗಿ ತಾಲೂಕಿನ ಹಲಸುಲ್ತಾನಪುರದ ಅರುಣ್ ಪಾಟೀಲ್, ಆಳಂದದ ಚೇತನ್ ನಂದಗಾಂವ್ ಮತ್ತು ರಾಯಚೂರಿನ ಪ್ರವೀಣಕುಮಾರ ಕೆ ಎಂಬ ಮೂವರು ಅಭ್ಯರ್ಥಿಗಳ ವಿಚಾರಣೆ ಬಾಕಿ ಇದೆ. ಸಿಐಡಿ ಮೂವರು ಮಹಿಳೆಯರ ಕಸ್ಟಡಿ ವಿಸ್ತರಣೆಯನ್ನು ಕೋರದಿರಬಹುದು, ಆದರೆ ಇತರರಿಗೆ ಹೆಚ್ಚಿನ ಕಸ್ಟಡಿಯನ್ನು ಬಯಸಬಹುದು ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇದುವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕಲಬುರಗಿ: ಪಿಎಸ್ಐ ನೇಮಕಾತಿ ಆಕ್ರಮ; ಪರೀಕ್ಷೆ ನಡೆದ ಶಿಕ್ಷಣ ಸಂಸ್ಥೆ ಮೇಲೆ ಸಿಐಡಿ ದಾಳಿ
ಪ್ರಮುಖ ಆರೋಪಿ ಹಾಗೂ ಜ್ಞಾನ ಗಂಗಾ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಸಿಐಡಿ ಶಂಕೆ ವ್ಯಕ್ತಪಡಿಸಿದೆ. ಸಂಸ್ಥೆಯ ಅಧ್ಯಕ್ಷರಾಗಿರುವ ಅವರ ಪತಿ ರಾಜೇಶ ಹಾಗರಗಿ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಆಯ್ದ ಅಭ್ಯರ್ಥಿಗಳಿಗೆ ನೊಟೀಸ್ ಜಾರಿ: ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಸುಮಾರು 50 ಅಭ್ಯರ್ಥಿಗಳಿಗೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಯಾವುದೇ ವ್ಯಕ್ತಿ ಅವ್ಯವಹಾರದಲ್ಲಿ ತೊಡಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಅಭ್ಯರ್ಥಿಗಳನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಲಾಗಿದೆ.
ಅಭ್ಯರ್ಥಿಗಳು ಇಂದು ವಿಚಾರಣೆಗಾಗಿ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ವಿಚಾರಣೆಗೆ ಹಾಜರಾಗುವಾಗ ಮೂಲ ಹಾಲ್ ಟಿಕೆಟ್ ಮತ್ತು ಅಭ್ಯರ್ಥಿಯ OME ಶೀಟ್ನ ಪ್ರತಿಯನ್ನು ತರುವಂತೆ ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಆಯ್ಕೆಯಾದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.