ಹುಬ್ಬಳ್ಳಿ ಗಲಭೆ ಪ್ರಕರಣ: ಇನ್ನೂ 10 ಮಂದಿಯ ಬಂಧನ, ಬಂಧಿತರು ಕಲಬುರಗಿ ಕಾರಾಗೃಹಕ್ಕೆ ಶಿಫ್ಟ್
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಳೆದ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಪೊಲೀಸರು ನಿನ್ನೆ ಮಂಗಳವಾರ ಇನ್ನೂ 10 ಮಂದಿಯನ್ನು ಬಂಧಿಸಿದ್ದಾರೆ.
Published: 20th April 2022 08:52 AM | Last Updated: 20th April 2022 01:18 PM | A+A A-

ಗಲಭೆಯಲ್ಲಿ ಪೊಲೀಸ್ ವ್ಯಾನ್ ಹಾನಿಗೀಡಾಗಿರುವುದು
ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಳೆದ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಪೊಲೀಸರು ನಿನ್ನೆ ಮಂಗಳವಾರ ಇನ್ನೂ 10 ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ ಇತರ 88 ಮಂದಿಯನ್ನು ಹುಬ್ಬಳ್ಳಿ ಜೈಲಿನಿಂದ ಕಲಬುರಗಿ ಕಾರಾಗೃಹಕ್ಕೆ ವರ್ಗಾಯಿಸಲಾಗಿದ್ದು, ಹುಬ್ಬಳ್ಳಿಯಲ್ಲಿದ್ದರೆ ಇನ್ನಷ್ಟು ಹಿಂಸಾಚಾರವಾಗುವ ಸಾಧ್ಯತೆಯಿದೆ ಎಂದು ಜಾಗೃತ ದಳದ ವರದಿ ತಿಳಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ವರ್ಗಾಯಿಸಲಾಗಿದೆ.
ಹಿಂಸಾಚಾರ ನಡೆದ ಮೂರು ದಿನಗಳ ನಂತರ ಹುಬ್ಬಳ್ಳಿ ಶಾಂತಿಯುತವಾಗಿದ್ದು ಆದರೂ ಕೂಡ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಪೊಲೀಸ್ ಠಾಣೆ ಮೇಲೆ ಕಲ್ಲೆಸೆದವರ ಮೇಲೆ ಪೊಲೀಸರು ಬಂಧನ ಜಾಲ ಮುಂದುವರಿಸಿದ್ದಾರೆ.
ಬಂಧಿತ 88 ಮಂದಿಯನ್ನು ಬಿಗಿ ಪೊಲೀಸ್ ರಕ್ಷಣೆಯಲ್ಲಿ ನಾಲ್ಕು ಬಸ್ಗಳಲ್ಲಿ ಕಲಬುರಗಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿ ನ್ಯಾಯಾಲಯ ಸೋಮವಾರ ಇಬ್ಬರನ್ನು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆದರೆ, ಹುಬ್ಬಳ್ಳಿ ಉಪ ಕಾರಾಗೃಹದ ಸಾಮರ್ಥ್ಯ 500 ಮಾತ್ರ ಇರುವ ಕಾರಣ ಆರೋಪಿಗಳನ್ನು ಕಲಬುರಗಿಗೆ ಸ್ಥಳಾಂತರಿಸಲಾಗಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂಸಾಚಾರದ ದಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪೊಲೀಸ್ ವಾಹನ ಹತ್ತಿ ಪ್ರಚೋದನಕಾರಿ ಭಾಷಣ ಮಾಡಿದ ಅರ್ಚಕರಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಅವರ ಮಾತುಗಳು ಗುಂಪನ್ನು ಕೆರಳಿಸಿ ಅದು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ. ಮರು ದಿನವೇ ಹುಬ್ಬಳ್ಳಿಯಿಂದ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಹೈದರಾಬಾದ್ಗೆ ಪರಾರಿಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಕೂಡ ಅರ್ಚಕರೊಂದಿಗೆ ಪೊಲೀಸ್ ವಾಹನ ಹತ್ತಿದ್ದಾರೆ ಎನ್ನಲಾಗಿದೆ. ಆದರೆ ಜನರು ಶಾಂತಿ ಕಾಪಾಡುವಂತೆ ಒತ್ತಾಯಿಸಲು ಮಾತ್ರ ಹೀಗೆ ಮಾಡಿದ್ದಾರೆ ಎಂದು ಹಳ್ಳೂರು ಸ್ಪಷ್ಟಪಡಿಸಿದರು. ಹಿಂಸಾಚಾರಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ. ಮಂಗಳವಾರದವರೆಗೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 12 ಪ್ರಕರಣಗಳು ದಾಖಲಾಗಿವೆ.
ಈ ಮಧ್ಯೆ, ಬಂಧಿತರ ಕುಟುಂಬ ಸದಸ್ಯರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅವರ ಸಂಬಂಧಿಕರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದರು. ಅವರಲ್ಲಿ ಕೆಲವು ಬಂಧಿತರಿಗೆ ಆರೋಗ್ಯ ಸಮಸ್ಯೆಗಳಿವೆ ಎಂದು ವೈದ್ಯಕೀಯ ವರದಿಗಳನ್ನು ತೋರಿಸಿ ಬಿಡುಗಡೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸಿದರು.