ಹುಬ್ಬಳ್ಳಿ ಗಲಭೆ: ವಿವಾದಾತ್ಮಕ ಪೋಸ್ಟ್ ಹಾಕಿದ್ದ ಅಭಿಷೇಕ್ ಹಿರೇಮಠ ಜಾಮೀನು ಅರ್ಜಿ ವಜಾ
ವಾಟ್ಸ್ ಆ್ಯಪ್ ನಲ್ಲಿ ವಿವಾದಾತ್ಮಕ ಸ್ಟೇಟಸ್ ಹಾಕಿ ಬಂಧಿತನಾಗಿರುವ ಹುಬ್ಬಳ್ಳಿಯ ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಬುಧವಾರ...
Published: 20th April 2022 07:15 PM | Last Updated: 20th April 2022 07:15 PM | A+A A-

ಹುಬ್ಬಳ್ಳಿ ಗಲಭೆ
ಹುಬ್ಬಳ್ಳಿ: ವಾಟ್ಸ್ ಆ್ಯಪ್ ನಲ್ಲಿ ವಿವಾದಾತ್ಮಕ ಸ್ಟೇಟಸ್ ಹಾಕಿ ಬಂಧಿತನಾಗಿರುವ ಹುಬ್ಬಳ್ಳಿಯ ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಬುಧವಾರ ವಜಾಗೊಳಿಸಿದೆ. ಆದರೆ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಭಿಷೇಕ ಹಿರೇಮಠ ನನ್ನು ವಿವಾದಾತ್ಮಕ ಸ್ಟೇಟಸ್ ಹಾಕಿದ್ದ ಆರೋಪದಡಿ ಏಪ್ರಿಲ್ 16ರಂದು ಪೊಲೀಸರು ಬಂಧಿಸಿದ್ದರು. ಈ ವಿದ್ಯಾರ್ಥಿಗೆ ಏ. 22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಕೀಲ ಸಂಜು ಬಡಸ್ಕರ 4ನೇ ಅಧಿಕ ದಿವಾಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನು ಓದಿ: ಹುಬ್ಬಳ್ಳಿ ಗಲಭೆ: ವಿವಾದಾತ್ಮಕ ಪೋಸ್ಟ್ ಹಾಕಿ ಬಂಧನಕ್ಕೀಡಾಗಿರುವ ಆರೋಪಿ ಹಿರೇಮಠ್ ಪಿಯು ಪರೀಕ್ಷೆ ಬರೆಯಲು ಕೋರ್ಟ್ ಗೆ ಮನವಿ
ಆದರೆ, ಅಭಿಷೇಕನಿಗೆ ಪರೀಕ್ಷೆ ಬರೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಕಾರಾಗೃಹದಲ್ಲೇ ಅಭ್ಯಾಸ ಮಾಡಲು ಪುಸ್ತಕ, ಮತ್ತಿತರ ವ್ಯವಸ್ಥೆ ಮಾಡಬೇಕು. ಸೂಕ್ತ ಬಂದೋಬಸ್ತ್ ಮೂಲಕ ಪರೀಕ್ಷೆಗೆ ಹಾಜರಾಗುವಂತೆ ಕಾರಾಗೃಹ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ ಎಂದು ಅಭಿಷೇಕ ಪರ ವಕೀಲ ಸಂಜು ಬಡಸ್ಕರ ತಿಳಿಸಿದ್ದಾರೆ.
ಪ್ರಚೋದನಾಕಾರಿ ಪೋಸ್ಟ್ ಹಾಕಿ ಕೋಮುಗಲಭೆಗೆ ಕಾರಣವಾಗಿದ್ದ ಯುವಕ ಅಭಿಷೇಕ್ ಹಿರೇಮಠ"ಗೆ ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.