
ಬಿಎಸ್ ಯಡಿಯೂರಪ್ಪ
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರಿಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಚಿವ ಸಂಪುಟದ ತೀರ್ಮಾನವನ್ನು ಅನುಮತಿಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಸಂಜೆ ವಿಮಾನ ನಿಲ್ದಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ವಿಮಾನ ನಿಲ್ದಾಣ ಆರಂಭಕ್ಕೂ ಮುನ್ನಾ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಲಿದೆ ಎಂದರು.
ಇಂದು ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
— Basavaraj S Bommai (@BSBommai) April 20, 2022
ಸಚಿವರಾದ @JnanendraAraga, @BABasavaraja, ಸಂಸದರಾದ @BABasavaraja, ಜಿಲ್ಲೆಯ ಶಾಸಕರು ಹಾಗೂ ಇತರರು ಉಪಸ್ಥಿತರಿದ್ದರು. pic.twitter.com/NwVeZVv2Ls
ಶಿವಮೊಗ್ಗ ವಿಮಾನ ನಿಲ್ದಾಣ ಇದೀಗ ಉಡಾನ್ ಯೋಜನೆಯಡಿ ಬರಲಿದ್ದು, ಮುಂದೆ ಹೆಜ್ಜೆಯಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗುವುದು, ಇದು ಮುಗಿಯುತ್ತಿದ್ದಂತೆಯೇ, ರಾತ್ರಿ ಲ್ಯಾಂಡಿಂಗ್ ಸೌಕರ್ಯವನ್ನು ಸಹ ಒದಗಿಸಲಾಗುವುದು ಎಂದರು.
ಡಿಸೆಂಬರ್ ನಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗುವುದರೊಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಮತ್ತು ಇದು ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಲಿದೆ ಎಂದು ಅವರು ತಿಳಿಸಿದರು.