ಹಾವೇರಿ: ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಣೆ ವೇಳೆ ಶೂಟೌಟ್, ಯುವಕನಿಗೆ ಗುಂಡೇಟು!
ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಪ್ರದರ್ಶನದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಎರಡು ಬಾರಿ ಗುಂಡು ಹಾರಿಸಿದ ಪರಿಣಾಮ 27 ವರ್ಷದ ಯುವಕ ಗಾಯಗೊಂಡಿದ್ದಾನೆ.
Published: 20th April 2022 01:00 AM | Last Updated: 20th April 2022 01:15 PM | A+A A-

ಹಾವೇರಿ: ಇಲ್ಲಿನ ರಾಜಶ್ರೀ ಚಿತ್ರಮಂದಿರದಲ್ಲಿ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಪ್ರದರ್ಶನದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಎರಡು ಬಾರಿ ಗುಂಡು ಹಾರಿಸಿದ ಪರಿಣಾಮ 27 ವರ್ಷದ ಯುವಕ ಗಾಯಗೊಂಡಿದ್ದಾನೆ. ಈ ಘಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ರಾತ್ರಿ 10.30ರ ಸಮಯದಲ್ಲಿ ನಡೆದಿದೆ.
ಗಾಯಾಳುವನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಶಿಗ್ಗಾಂವಿ ಪೊಲೀಸರ ಪ್ರಕಾರ, ಗಾಯಾಳು ಮುಗಳಿ ಗ್ರಾಮದ ವಸಂತಕುಮಾರ ಶಿವಾಪುರ ಎಂಬಾತ ತನ್ನ ಸ್ನೇಹಿತರೊಂದಿಗೆ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದಿದ್ದ. ಅವನು ತನ್ನ ಕಾಲುಗಳನ್ನು ಮುಂದಿನ ಸೀಟಿನ ಮೇಲೆ ಇಟ್ಟಾಗ, ಮುಂದಿನ ಸೀಟ್ ನಲ್ಲಿದ್ದ ವ್ಯಕ್ತಿಯು ಅವನೊಂದಿಗೆ ವಾಗ್ವಾದ ಪ್ರಾರಂಭಿಸಿದ್ದಾನೆ. ಅನಂತರ ಅವನು ಥಿಯೇಟರ್ ನಿಂದ ಹೊರಹೋದನು. ಕೆಲವು ನಿಮಿಷಗಳ ನಂತರ ಪಿಸ್ತೂಲ್‌ನೊಂದಿಗೆ ಹಿಂತಿರುಗಿ ವಸಂತಕುಮಾರ್ ಮೇಲೆ ಗುಂಡು ಹಾರಿಸಿದನು ಎನ್ನಲಾಗಿದೆ.
ಇದನ್ನೂ ಓದಿ: ಸೋಮವಾರದ 'ಅಗ್ನಿ ಪರೀಕ್ಷೆ' ಗೆದ್ದ 'ಕೆಜಿಎಫ್-2'; ಮಕಾಡೆ ಮಲಗಿದ ತಮಿಳು ಚಿತ್ರ 'ಬೀಸ್ಟ್'!!
ಗಾಯಗೊಂಡ ವ್ಯಕ್ತಿಗೆ ಇತರರೊಂದಿಗೆ ಯಾವುದೇ ದ್ವೇಷವಿರಲಿಲ್ಲ, ಸಂತ್ರಸ್ತನು ನಟ ಯಶ್ ಅವರ ಅಪಾರ ಅಭಿಮಾನಿಯಾಗಿದ್ದು, ಮಂಗಳವಾರ ಜಮೀನಿನಲ್ಲಿ ಕೆಲಸ ಮಾಡಿದ ನಂತರ ತನ್ನ ಸ್ನೇಹಿತರೊಂದಿಗೆ ರಾತ್ರಿ ಸಿನಿಮಾ ನೋಡಲು ಬಂದಿದ್ದನು. ಗುಂಡು ಹಾರಿಸಿದಾತ ತಲೆಮರೆಸಿಕೊಂಡಿದ್ದು, ಆತನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಪರವಾನಗಿ ಪಡೆದ ಬಂದೂಕು ಹೊಂದಿರುವವರ ಪಟ್ಟಿಯನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಮೂರು ಸುತ್ತು ಗುಂಡು ಹಾರಿಸಿದ್ದಾನೆ, ಒಂದು ಗಾಳಿಯಲ್ಲಿ ಮತ್ತು ಎರಡು ಗುಂಡು ಸಂತ್ರಸ್ಥನ ಹೊಟ್ಟೆಗೆ ಹಾರಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೊದಲ ಸುತ್ತಿನ ಗುಂಡು ಹಾರಿಸಿದ ನಂತರ, ವಸಂತಕುಮಾರ್ ಸ್ನೇಹಿತರು ಸೇರಿದಂತೆ ಥಿಯೇಟರ್‌ನಲ್ಲಿದ್ದ ಜನರು ಹೊರಗೆ ಓಡಿಹೋದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ. ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.