2ನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆ: 1,334 ಮರ ಕತ್ತರಿಸಲು ಹೈಕೋರ್ಟ್ ಅನುಮತಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಒಟ್ಟು 1,334 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
Published: 21st April 2022 12:47 PM | Last Updated: 21st April 2022 12:47 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಒಟ್ಟು 1,334 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಮೆಟ್ರೋ ಕಾಮಗಾರಿಗಾಗಿ ನಗರದಲ್ಲಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ಟಿ.ದತ್ತಾತ್ರೇಯ ದೇವರೆ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇದರಿಂದ ಕಾಮಗಾರಿ ನಡೆಯುವ ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್‌ಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ರಸ್ತೆಯಲ್ಲಿರುವ 1,334 ಮರ ಕತ್ತರಿಸಲು ಅವಕಾಶ ದೊರಕಿದಂತಾಗಿದೆ.
ಇದನ್ನೂ ಓದಿ: ಬಿಎಂಟಿಸಿಯಂತೆ ಇನ್ನು ಮುಂದೆ 'ನಮ್ಮ ಮೆಟ್ರೋ'ದಲ್ಲೂ ಡೈಲಿ ಪಾಸ್ ಲಭ್ಯ!
ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು ವಾದ ಮಂಡಿಸಿ, 2022ರ ಮಾರ್ಚ್ 8ರಂದು ಮರ ತಜ್ಞರ ಸಮಿತಿಯು ವರದಿ ನೀಡಿತ್ತು. ಅದನ್ನು ಆಧರಿಸಿ ಕಸ್ತೂರಿ ನಗರ ಮತ್ತು ಕೆಂಪಾಪುರದ ಹೊರವರ್ತುಲ ರಸ್ತೆಯಲ್ಲಿ ಬರುವ ಮರಗಳ ಸ್ಥಳಾಂತರ ಮತ್ತು ತೆರವಿಗೆ ಬಿಬಿಎಂಪಿ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ನೀಡಿದ್ದಾರೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ನಡುವೆ 1,334 ಮರಗಳನ್ನು ಕಡಿಯಲು, 163 ಮರಗಳನ್ನು ಸ್ಥಳಾಂತರಿಸಲು ಹಾಗೂ 26 ಮರಗಳನ್ನು ಉಳಿಸಿಕೊಳ್ಳಲು ಅನುಮತಿ ನೀಡಿತು.
ಹಾಗೆಯೇ, ವೆಲ್ಲಾರ್ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಮಾರ್ಗದಲ್ಲಿ 8 ಮರಗಳನ್ನು ಕತ್ತರಿಸಲು ಮತ್ತು 2 ಮರಗಳನ್ನು ಉಳಿಸಿಕೊಳ್ಳಲು ಅನುಮತಿ ನೀಡಿ ಆದೇಶಿಸಿತು.