ಹುಬ್ಬಳ್ಳಿ ಗಲಭೆಯಲ್ಲಿ ಪರೋಕ್ಷವಾಗಿ ಭಾಗಿಯಾದವರ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ: ಡಿಜಿ-ಐಜಿಪಿ ಪ್ರವೀಣ್ ಸೂದ್
ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಗಲಭೆ ಪ್ರಕರಣದಲ್ಲಿ ಭಾಗಿಯಾದವರೆಲ್ಲರಿಗೂ ಕಠಿಣ ಶಿಕ್ಷೆ ನೀಡಲಾಗುವುದು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದವರೆಲ್ಲರಿಗೂ ಕಠಿಣ ಶಿಕ್ಷೆ ನೀಡುತ್ತೇವೆ, ಪಿತೂರಿಯಲ್ಲಿ ಭಾಗಿಯಾದವರನ್ನು ಸಹ ಬಿಡುವುದಿಲ್ಲ ಎಂದು ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
Published: 22nd April 2022 10:36 AM | Last Updated: 22nd April 2022 01:35 PM | A+A A-

ಪ್ರವೀಣ್ ಸೂದ್
ಬೆಂಗಳೂರು: ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಗಲಭೆ ಪ್ರಕರಣದಲ್ಲಿ ಭಾಗಿಯಾದವರೆಲ್ಲರಿಗೂ ಕಠಿಣ ಶಿಕ್ಷೆ ನೀಡಲಾಗುವುದು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದವರೆಲ್ಲರಿಗೂ ಕಠಿಣ ಶಿಕ್ಷೆ ನೀಡುತ್ತೇವೆ, ಪಿತೂರಿಯಲ್ಲಿ ಭಾಗಿಯಾದವರನ್ನು ಸಹ ಬಿಡುವುದಿಲ್ಲ ಎಂದು ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದವರನ್ನು ಬಂಧಿಸಿದ್ದೇವೆ. ಪರೋಕ್ಷವಾಗಿ ಭಾಗಿಯಾಗಿದ್ದವರನ್ನು ಬಂಧಿಸಲು ಸ್ವಲ್ಪ ಕಾಲ ಹಿಡಿಯುತ್ತದೆ. ಪರೋಕ್ಷವಾಗಿ ಕೈವಾಡ ಇರುವವರನ್ನು ಪತ್ತೆಹಚ್ಚುತ್ತೇವೆ. ಪೊಲೀಸರ ಮೇಲೆ, ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಒಳ್ಳೆಯ ಸಂಗತಿಯಲ್ಲ ಎಂದರು.
ಇತ್ತೀಚೆಗೆ ಸಮಾಜದ ಮೇಲೆ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗುತ್ತಿದೆ. ಹೀಗಾಗಿ ಅದನ್ನು ಸೂಕ್ಷ್ಮವಾಗಿ ಬಳಸಬೇಕು. ಜಾಗ್ರತೆಯಿಂದ ವ್ಯಾಖ್ಯಾನಿಸಬೇಕು. ಸೋಷಿಯಲ್ ಮೀಡಿಯಾದಲ್ಲಿ ಇವರೇ ವ್ಯಕ್ತಿ ಎಂದು ಗುರುತು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಸೋಷಿಯಲ್ ಮೀಡಿಯಾ ಓಪನ್ ಫುಟ್ ಬಾಲ್ ಗ್ರೌಂಡ್ ತರ ಆಗಿದ್ದು ಯಾರು ಕೂಡ ಕಿಕ್ ಮಾಡಿ ಓಡಿಹೋಗಲು ಸಾಧ್ಯವಿದೆ ಎಂದು ವ್ಯಾಖ್ಯಾನಿಸಿದರು.
ಪಿಎಸ್ಐ ನೇಮಕಾತಿ ಹಗರಣ ತನಿಖೆ: ಪಿಎಸ್ಐ ನೇಮಕಾತಿ ಹಗರಣ ತನಿಖೆ ಕುರಿತು ಕೂಡ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್, 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಪಟ್ಟಿ ಪ್ರಕಟವಾಗಿ ಅದರಲ್ಲಿ ಹಗರಣ ಆದಂತೆ ಕಂಡುಬಂದಿಲ್ಲ, ಆದರೆ ನಮಗೆ, ಗೃಹ ಸಚಿವರಿಗೆ ಅದರಲ್ಲಿ ಸ್ವಲ್ಪ ಅಕ್ರಮ ನಡೆದಂತೆ ಕಂಡುಬರುತ್ತಿದೆ. ಹಾಗೆಂದು ಅಂತೆಕಂತೆಗಳ ಮೇಲೆ ವಿಚಾರ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ತಲೆಮರೆಸಿಕೊಂಡಿದ್ದ ಮೌಲ್ವಿ ವಾಸೀಂ ಪಠಾಣ್ ಬಂಧನ
ನಮ್ಮ ಗಮನಕ್ಕೆ ಸರಿಯಾದ ಸಾಕ್ಷಿ ಬಂದ ಮೇಲೆ ಎಫ್ಐಆರ್ ದಾಖಲಿಸಿ ಕೆಲವರನ್ನು ಬಂಧಿಸಿದ್ದೇವೆ. ಎಲ್ಲಾ ಅಭ್ಯರ್ಥಿಗಳನ್ನು ಸಿಐಡಿ ಪರಿಶೀಲನೆ ಮಾಡುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿದ್ದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು, ಸರಿಯಾದ ಸಾಕ್ಷಿ ಸಿಕ್ಕಿದರೆ ಅಂತಹ ಅಭ್ಯರ್ಥಿಗಳ ವಿರುದ್ಧ ಅವರು ಇನ್ನು ಮುಂದೆ ಪರೀಕ್ಷೆಯೇ ಬರೆಯದಂತೆ ಅನರ್ಹಗೊಳಿಸುತ್ತೇವೆ ಎಂದು ಹೇಳಿದರು.
ಆಜಾನ್ ಸದ್ದು: ರಾಜ್ಯದಲ್ಲಿ ಆಜಾನ್ಗೆ ಸಂಬಂಧಿಸಿದಂತೆ ಹೈ ಕೋರ್ಟ್ ಆದೇಶದಂತೆ ಈಗಾಗಲೇ ಮಸೀದಿ ಹಾಗು ಸ್ಪೀಕರ್ ಇಡುವಂತಹ ಎಲ್ಲಾ ಕಡೆ ನೋಟಿಸ್ ನೀಡಲಾಗಿದೆ. ಎಲ್ಲಿಯೂ ಹೈ ಕೋರ್ಟ್ ಆದೇಶ ಉಲ್ಲಂಘನೆ ಆಗಲು ಬಿಡಲ್ಲ. ರಾಜ್ಯಾದ್ಯಂತ ಪೊಲೀಸರು ಈಗಾಗಲೇ ಹಲವು ಕಡೆ ನೋಟಿಸ್ ನೀಡಿದ್ದಾರೆ. ಮುಂದೆ ನ್ಯಾಯಾಲಯದ ಅದೇಶ ಪಾಲನೆ ಮಾಡಲಾಗುತ್ತದೆ ಎಂದರು.