ಹಾಜರಾತಿ ಇಲ್ಲದೆ ವೇತನವಿಲ್ಲ: ಆರೋಗ್ಯ ಸಿಬ್ಬಂದಿಗೆ ಸಚಿವ ಡಾ. ಕೆ.ಸುಧಾಕರ್
ಆರೋಗ್ಯಾಧಿಕಾರಿಗಳ ಗೈರುಹಾಜರಿಯ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಹಾಗೂ ಶಿಸ್ತು, ಹೊಣೆಗಾರಿಕೆಯನ್ನು ಹೆಚ್ಚಿಸಲು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ಮತ್ತು ವೇತನವನ್ನು ಹಾಜರಾತಿಗೆ ಜೋಡಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನಿರ್ಧರಿಸಿದ್ದಾರೆ.
Published: 22nd April 2022 09:36 AM | Last Updated: 22nd April 2022 01:31 PM | A+A A-

ಸಚಿವ ಸುಧಾಕರ್
ಬೆಂಗಳೂರು: ಆರೋಗ್ಯಾಧಿಕಾರಿಗಳ ಗೈರುಹಾಜರಿಯ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಹಾಗೂ ಶಿಸ್ತು, ಹೊಣೆಗಾರಿಕೆಯನ್ನು ಹೆಚ್ಚಿಸಲು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ಮತ್ತು ವೇತನವನ್ನು ಹಾಜರಾತಿಗೆ ಜೋಡಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನಿರ್ಧರಿಸಿದ್ದಾರೆ.
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ, ಇಲಾಖೆ ಕಚೇರಿ ಮತ್ತು ಸಂಸ್ಥೆಗಳಲ್ಲಿ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದಿರುವ ಬಗ್ಗೆ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾ 4ನೇ ಅಲೆ ಬಂದಿಲ್ಲ, ಎಲ್ಲಾ ಅರ್ಹರು 3ನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು: ಸಚಿವ ಡಾ.ಕೆ.ಸುಧಾಕರ್
ಸರ್ಕಾರಿ ಅಧಿಕಾರಿಗಳ ಅಶಿಸ್ತು ಸಾರ್ವಜನಿಕ ಆರೋಗ್ಯ ಸೇವೆಗಳ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲಸದ ವೇಳೆ ಗೈರು ಹಾಜರಾದವರ ವೇತನ ಕಡಿತಗೊಳಿಸುವಂತೆ ಸೂಚನೆ ನೀಡಿದ್ದೇನೆ. ಇದಕ್ಕಾಗಿ ಆರೋಗ್ಯ ಇಲಾಖೆಗೆ ಒಳಪಡುವ ಎಲ್ಲಾ ಆಸ್ಪತ್ರೆಗಳು ಮತ್ತು ಇತರ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ (ಎಇಬಿಎಸ್) ಅಳವಡಿಸಲಾಗುವುದು, ಇದು ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಆಧಾರ್ ಕಾರ್ಡ್ ಆಧರಿಸಿ ಹಾಜರಾತಿಯನ್ನು ದಾಖಲಿಸುತ್ತದೆ”ಎಂದು ತಿಳಿಸಿದರು.
ಕೋವಿಡ್-19 ಕಾರಣದಿಂದಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ನಿಲ್ಲಿಸಲಾಗಿತ್ತು, ಆದರೆ ಕಳೆದ ಎರಡು ತಿಂಗಳಿನಿಂದ ಅದನ್ನು ಮತ್ತೆ ಕಡ್ಡಾಯಗೊಳಿಸಲಾಗಿದೆ. ಇಲಾಖೆಯ ಆಸ್ಪತ್ರೆ, ಸಂಸ್ಥೆ ಮತ್ತು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಡಿಡಿಒ (ಸ್ಯಾಲರಿ ಡ್ರಾಯಿಂಗ್ ಆಫೀಸರ್)ಗಳು ಪ್ರತಿ ತಿಂಗಳು ಎಇಬಿಎಎಸ್ನಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಅದರ ಅನುಸಾರವೇ ವೇತನ ಪಾವತಿಗೆ ವರದಿ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ (ಡಿಎಚ್ಒ) ಸಲ್ಲಿಸಬೇಕು.
ಇದನ್ನೂ ಓದಿ: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ: 8 ದೇಶಗಳ ಪ್ರಯಾಣಿಕರ ಮೇಲೆ ತೀವ್ರ ನಿಗಾ- ಸಚಿವ ಸುಧಾಕರ್
ಅವರು ಅದನ್ನು ಪರಿಶೀಲಿಸಿ ವೇತನ ಬಿಡುಗಡೆ ಮತ್ತು ಕಡಿತಕ್ಕೆ ಸೂಚನೆ ನೀಡಲಿದ್ದಾರೆ. ಡಿಎಚ್ಒ ಅವರು ಕೈಗೊಂಡ ಕ್ರಮಗಳನ್ನ ಮೇಲಿನ ಹಂತದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಲಿದ್ದಾರೆ.
ಯಾರೇ ಆಗಲಿ ಶೇ. 80ರಷ್ಟು ಹಾಜರಾತಿಗಿಂತ ಕಡಿಮೆ ಇದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುತ್ತದೆ. ನಂತರ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ವಹಿಸಲಾಗುವುದು. ಒಂದು ವೇಳೆ ಶೇ.80ರಷ್ಟು ಹಾಜರಾತಿ ಇದ್ದಲ್ಲಿ ವೇತನ ಬಿಡುಗಡೆ ಮಾಡಿ ಉಳಿದ ಶೇ.20 ಹಾಜರಾತಿ ದಾಖಲು ಮಾಡದಿರುವುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುತ್ತದೆ. ಸಿಬ್ಬಂದಿ ನೀಡುವ ಕಾರಣ ನಿಜವಾಗಿದ್ದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಒಂದು ವೇಳೆ ಸಬೂಬು ನೀಡಿದರೆ ಅಥವಾ ನೀಡಿರುವ ಮಾಹಿತಿ ಸುಳ್ಳು ಆಗಿದ್ದಲ್ಲಿ ಮುಂದಿನ ತಿಂಗಳ ವೇತನದಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದರು.