ಕೂಡಲೇ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಏಪ್ರಿಲ್ 20, 2022 ರಂದು ಪಾಲಿಕೆ ಹೊರಡಿಸಿರುವ ಕಾರ್ಯಾದೇಶದ ಪ್ರಕಾರ ಎಆರ್'ಟಿಎಸ್ ಸಂಸ್ಥೆಯು ಕೂಡಲೇ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಆರಂಭಿಸಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ.
Published: 22nd April 2022 12:23 PM | Last Updated: 22nd April 2022 01:41 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಏಪ್ರಿಲ್ 20, 2022 ರಂದು ಪಾಲಿಕೆ ಹೊರಡಿಸಿರುವ ಕಾರ್ಯಾದೇಶದ ಪ್ರಕಾರ ಎಆರ್'ಟಿಎಸ್ ಸಂಸ್ಥೆಯು ಕೂಡಲೇ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಆರಂಭಿಸಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ನಗರದ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನಸ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಈ ವೇಳೆ ನಗರದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್ (ಎಆರ್'ಟಿಎಸ್) ಸಂಸ್ಥೆಗೆ ಏ.20 ರಂದು ತಾತ್ಕಾಲಿಕ ಕಾರ್ಯಾದೇಶ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಬಿಬಿಎಂಪಿ ಮಾಹಿತಿ ನೀಡಿತು.
ಇದನ್ನೂ ಓದಿ: 2ನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆ: 1,334 ಮರ ಕತ್ತರಿಸಲು ಹೈಕೋರ್ಟ್ ಅನುಮತಿ
ಮಾಹಿತಿ ದಾಖಲಿಸಿಕೊಂಡ ನ್ಯಾಯಪೀಠ, ಏ.20ರಂದು ಪಾಲಿಕೆ ಹೊರಡಿಸಿರುವ ಕಾರ್ಯಾದೇಶದ ಪ್ರಕಾರ ಎಆರ್'ಟಿಎಸ್ ಸಂಸ್ಥೆಯು ತಕ್ಷಣವೇ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಆರಂಭಸಬೇಕೆಂದು ನಿರ್ದೇಶಿಸಿತು. ಅಲ್ಲದೆ, ಲೋಕೋಪಯೋಗಿ ಇಲಾಖೆಯು ರಸ್ತೆ ಗುಂಡಿ ಮುಚ್ಚುವ ಪೈಥಾನ್ ಯಂತ್ರಕ್ಕೆ ಪ್ರತಿ ಗುಂಟೆಗೆ ರೂ.1,249 ನೀಡಲಾಗುವುದು ಎಂದು ಷೆಡ್ಯೂಲ್ ದರ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಅದನ್ನು ಗಮನದಲ್ಲಿಟ್ಟು ರಸ್ತೆ ಗುಂಡಿ ಮುಟ್ಟುವ ಪೈಥಾನ್ ಯಂತ್ರಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಪುನರ್ ಪರಿಗಣಿಸಬೇಕೆಂದು ಸೂಚಿಸಿದರು.
ಹಾಗೆಯೇ ದರ ನಿಗದಿ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಕೈಗೊಂಡ ನಿರ್ಧಾರ ಹಾಗೂ ರಸ್ತೆ ಗುಂಡಿ ಮುಚ್ಚಿರುವುದಕ್ಕೆ ಸಂಬಂಧಿಸಿದ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಕೆಲಸ ಆರಂಭಿಸಲು ಕಂಪನಿಯು ಮುಂಗಡ ಹಣಕ್ಕೆ ಬೇಡಿಕೆ ಸಲ್ಲಿಸಿದರೆ, ಅದನ್ನು ಬಿಬಿಎಂಪಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮೇ.31ಕ್ಕೆ ಮುಂದೂಡಿತು.
ಏ.19ರಂದು ಅರ್ಜಿ ವಿಚಾರಣೆಗೆ ಬಂದಿದ್ದಾಗ ಗುಂಡಿ ಮುಚ್ಚುವ ಕಾಮಗಾರಿ ನಡೆಸಲು ಎಆರ್ಟಿಎಸ್ ಸಂಸ್ಥೆಗೆ ಕಾರ್ಯಾದೇಶ ನೀಡಲು ವಿಳಂಬ ಮಾಡಲಾಗಿದೆ ಎಂದು ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿತ್ತು. ಜೊತೆಗೆ 36 ಗಂಟೆಗಳ ಒಳಗೆ ಕಾರ್ಯಾದೇಶ ನೀಡಬೇಕೆಂದು ಗಡುವು ನೀಡಿತ್ತು.
ಇದನ್ನೂ ಓದಿ: ಅಧ್ಯಕ್ಷರ ಚುನಾವಣೆಯಲ್ಲಿ ನಾಮನಿರ್ದೇಶಿತ ಕೌನ್ಸಿಲರ್ಗಳಿಗೆ ಮತ ಚಲಾಯಿಸುವ ಹಕ್ಕಿಲ್ಲ: ಹೈಕೋರ್ಟ್
ಗುರುವಾರ ಅರ್ಜಿ ವಿಚಾರಣೆಗೆ ಬಂದಾಗ ಬಿಬಿಎಂಪಿ ವಕೀಲರು ಹಾಜರಾಗಿ, ಬೆಂಗಳೂರಿನ 182 ಕಿ.ಮೀ ಪ್ರಮುಖ ರಸ್ತೆ, ಪಶ್ಚಿಮ ವಲಯದ ಆಯ್ದ ವಾರ್ಡ್ ಗಳಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಏ.20ರಂದು ಎಆರ್'ಟಿಎಸ್ ಸಂಸ್ಥೆಗೆ ಬಿಬಿಎಂಪಿ ತಾತ್ಕಾಲಿಕ ಕಾರ್ಯಾದೇಶ ಮತ್ತು ಒಪ್ಪಿಗೆ ಪತ್ರ ನೀಡಿದೆ ಎಂದರು.