ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಆಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ; ಎಡಿಜಿಪಿ ವರ್ಗಾವಣೆಗೆ ಒತ್ತಾಯ
ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ (PSI recruitment exam scam) ಭಾರೀ ದೊಡ್ಡ ಹಗರಣ ನಡೆದಿರುವ ಆರೋಪ ಇದೀಗ ರಾಜ್ಯ ರಾಜಕೀಯವನ್ನು ತಲ್ಲಣಗೊಳಿಸಿದೆ. ಇಷ್ಟು ದಿನ ಕೇವಲ ಆರೋಪ ಮಾಡಿಕೊಂಡು ಬರುತ್ತಿದ್ದ ಕಾಂಗ್ರೆಸ್ ಗೆ ಇದೀಗ ದೊಡ್ಡ ಅಸ್ತ್ರ ಸಿಕ್ಕಿದೆ.
Published: 23rd April 2022 11:44 AM | Last Updated: 23rd April 2022 03:13 PM | A+A A-

ಪ್ರಿಯಾಂಕ್ ಖರ್ಗೆ
ಕಲಬುರಗಿ: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ (PSI recruitment exam scam) ಭಾರೀ ದೊಡ್ಡ ಹಗರಣ ನಡೆದಿರುವ ಆರೋಪ ಇದೀಗ ರಾಜ್ಯ ರಾಜಕೀಯವನ್ನು ತಲ್ಲಣಗೊಳಿಸಿದೆ. ಇಷ್ಟು ದಿನ ಕೇವಲ ಆರೋಪ ಮಾಡಿಕೊಂಡು ಬರುತ್ತಿದ್ದ ಕಾಂಗ್ರೆಸ್ ಗೆ ಇದೀಗ ದೊಡ್ಡ ಅಸ್ತ್ರ ಸಿಕ್ಕಿದೆ.
ಅದು ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಂಭಾಷಣೆಯನ್ನು ಹೊಂದಿರುವ ಆಡಿಯೊ ಬಿಡುಗಡೆ ಮಾಡಿದ್ದು ಇದು ಯಾವ ಹಂತಕ್ಕೆ ಹೋಗಲಿದೆ ಎಂಬುದು ಸದ್ಯದ ಪ್ರಶ್ನೆ. ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೊ ಬಿಡುಗಡೆ ಮಾಡಿದ್ದಾರೆ.
ಅಲ್ಲದೆ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ADGP) ಅವರನ್ನು ಹುದ್ದೆಯಿಂದ ವರ್ಗಾಯಿಸಬೇಕು ಇಲ್ಲವೇ ಸಿಐಡಿ ತನಿಖೆ ಮುಗಿಯುವವರೆಗೆ ಅವರನ್ನು ರಜೆಯ ಮೇಲೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರರೂ ಆಗಿರುವ ಪ್ರಿಯಾಂಕ್ ಖರ್ಗೆ, ಎಡಿಜಿಪಿಯವರ ಮೇಲ್ವಿಚಾರಣೆಯಲ್ಲಿ ಕಳೆದ ಅಕ್ಟೋಬರ್ 3ರಂದು ಪಿಎಸ್ಐ ಹುದ್ದೆ ನೇಮಕಾತಿಗೆ ಪ್ರವೇಶ ಪರೀಕ್ಷೆ ನಡೆದಿತ್ತು. ಎಡಿಜಿಪಿಯವರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು. ಅದಕ್ಕಾಗಿ ತನಿಖೆ ಮುಗಿಯುವವರೆಗೆ ಎಡಿಜಿಪಿಯವರನ್ನು ಬೇರೆ ಇಲಾಖೆಗೆ ವರ್ಗಾಯಿಸಿ ಇಲ್ಲವೇ ರಜೆ ಮೇಲೆ ಕಳುಹಿಸಿ ಎಂದು ಒತ್ತಾಯಿಸಿದರು. ಅಲ್ಲದೆ ನೈತಿಕ ಹೊಣೆ ಹೊತ್ತು ಆರಗ ಜ್ಞಾನೇಂದ್ರ ಅವರು ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಸಹ ಹೇಳಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೊ ತನಿಖೆ: ಸಿಎಂ ಬೊಮ್ಮಾಯಿ
ಪರೀಕ್ಷೆಯಲ್ಲಿ ಅಕ್ರಮ ನಡೆದ ಸ್ಥಳ ಎನ್ನಲಾಗುತ್ತಿರುವ ಕಲಬುರಗಿಯ ಜ್ಞಾನಗಂಗಾ ಆಂಗ್ಲ ಮಾಧ್ಯಮ ಶಾಲೆಯ ಸೆಕ್ರೆಟರಿಯಾಗಿರುವ ಬಿಜೆಪಿ ಕಾರ್ಯಕರ್ತೆ ದಿವ್ಯಾ ಹಾರಂಗಿಯವರನ್ನು ಇನ್ನೂ ಏಕೆ ಪೊಲೀಸರು ಬಂಧಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ದಿವ್ಯಾ ಹಾರಂಗಿಯವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆಂದರೆ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಅವರು ಎಲ್ಲಿದ್ದಾರೆ ಎಂದು ಗೊತ್ತಿದೆಯಲ್ಲವೇ ಎಂದು ಪ್ರಶ್ನಿಸಿದರು.
ಕಲಬುರಗಿ ಡಿಡಿಪಿಐ ಅವರು ಜ್ಞಾನ ಗಂಗಾ ಆಂಗ್ಲ ಮಾಧ್ಯಮ ಶಾಲೆಯನ್ನು ಪಿಎಸ್ಐ ಸಿಇಟಿ ಪರೀಕ್ಷಾ ಕೇಂದ್ರವನ್ನಾಗಿ(PSI recruitment exam scam) ಪರಿಗಣಿಸದಂತೆ ಅಕ್ಟೋಬರ್ಗೆ ಮುನ್ನವೇ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ಯಾರ ಶಿಫಾರಸಿನ ಮೇರೆಗೆ ಜ್ಞಾನ ಗಂಗಾ ಸಂಸ್ಥೆಯನ್ನು ಸಿಇಟಿ ಕೇಂದ್ರಕ್ಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಸರ್ಕಾರ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಆಡಿಯೊ ಕ್ಲಿಪ್ ಬಿಡುಗಡೆ: ವಿವಾದದಲ್ಲಿ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿ ಹಾಗೂ ಮಧ್ಯವರ್ತಿಯೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ಅನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಶೀಘ್ರದಲ್ಲೇ ಬಂಧನ: ಸಿಎಂ ಬೊಮ್ಮಾಯಿ
ಪರೀಕ್ಷೆಗೆ ಮುನ್ನವೇ ಅಭ್ಯರ್ಥಿಗೆ ಪರೀಕ್ಷಾ ಅಕ್ರಮಕ್ಕೆ ಅನುಕೂಲವಾಗುವ ಕೇಂದ್ರವನ್ನು ಮಂಜೂರು ಮಾಡುವಂತೆ ಅರ್ಜಿ ಸಂಖ್ಯೆ ಕಳುಹಿಸುವಂತೆ ಮಧ್ಯವರ್ತಿಯೊಬ್ಬರು ಕೇಳುತ್ತಿರುವ ಧ್ವನಿ ಕ್ಲಿಪ್ಪಿಂಗ್ನಲ್ಲಿ ಕೇಳಿಬಂದಿದೆ. ಎಲ್ಲವೂ ಇತ್ಯರ್ಥವಾಗಿದ್ದು, ಬಹುತೇಕ ಎಲ್ಲರೂ ಈ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ಆಯ್ಕೆಯಾಗುವುದಿಲ್ಲ ಎಂಬ ಆತಂಕ ಪಡುವ ಅಗತ್ಯವಿಲ್ಲ ಎಂಬ ಮಾತು ಅದರಲ್ಲಿದೆ. ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್ಐ ಹುದ್ದೆಗಳನ್ನು ಭರ್ತಿ ಮಾಡಲು ಪಿಎಸ್ಐ ಸಿಇಟಿಗೆ ಸಂಬಂಧಿಸಿದಂತೆ ಡೀಲ್ಗಳು ನಡೆದಿವೆ ಎಂದು ಆಡಿಯೊದಲ್ಲಿ ಕೇಳಿಬಂದಿದೆ. ಪರೀಕ್ಷೆಯನ್ನು ನಂತರ ಮುಂದೂಡಲಾಗಿದೆ.
ಈ ಪ್ರಕರಣ ಸಂಬಂಧ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸಿಐಡಿ ಬಂಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ನಾನು ಯಾರನ್ನೂ ರಕ್ಷಿಸುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಸಿಐಡಿ ನನ್ನ ಕೈವಾಡ ಕಂಡು ಬಂದರೆ ನನ್ನನ್ನೂ ಪ್ರಶ್ನಿಸಲಿ. ಈ ಪರೀಕ್ಷೆಗಳನ್ನು ಬರೆದಿರುವ 57 ಸಾವಿರ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂಬುದಷ್ಟೆ ನಮ್ಮ ಉದ್ದೇಶ ಎಂದು ಹೇಳಿದರು.