
ಸಂಗ್ರಹ ಚಿತ್ರ
ಬೆಳಗಾವಿ/ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ನಾಯಕ ಮಹಾಂತೇಶ ಪಾಟೀಲ್ ರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಪಾಟೀಲ್ ಅವರನ್ನು ಅಫಜಲಪುರದ ನ್ಯಾಷನಲ್ ಹಾಲ್ ನಲ್ಲಿ ಬಂಧಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಸಾಧನಗಳನ್ನು ಬಳಸಿ ಪಿಎಸ್ಐ ಪರೀಕ್ಷೆಯನ್ನು ಬರೆದಿರುವುದು ಕಂಡು ಬಂದಿದ್ದು, ಇದರಲ್ಲಿ ಪಾಟೀಲ್ ಅವರೂ ಭಾಗಿಯಾಗಿದ್ದಾರೆ ಮತ್ತು ಪ್ರಕರಣದ ಪ್ರಮುಖ ಆರೋಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೊ ತನಿಖೆ: ಸಿಎಂ ಬೊಮ್ಮಾಯಿ
ನ್ಯಾಷನಲ್ ಹಾಲ್ ನಲ್ಲಿ ಸಾಮೂಹಿಕ ವಿವಾರ ಕಾರ್ಯಕ್ರಮವನ್ನು ಮಹಾಂತೇಶ್ ಪಾಟೀಲ್ ಹಾಗೂ ಅವರ ಸಹೋದರ ಡಿ.ಆರ್. ಪಾಟೀಲ್ ಅವರು ಆಯೋಜಿಸುತ್ತಿದ್ದು, ಈ ವೇಳೆ ಪೊಲೀಸರು ಮಹಾಂತೇಶ್ ಅವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಮಹಾಂತೇಶ್ ಬಂಧನದ ವೇಳೆ ಅವರ ಸಹೋದರ ಸೇರಿದಂತೆ ಹಲವು ಬೆಂಬಲಿಗರು ಸಿಐಡಿ ಅಧಿಕಾರಿಗಳಿಗೆ ಬೆದರಿಕೆ ಹಾಕಲು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸಹೋದರನನ್ನು ಬಂಧಿಸಿದರೆ ತೀವ್ರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಪೊಲೀಸರಿಗೆ ಡಿಆರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.