ಮಲ್ಲೇಶ್ವರದಲ್ಲಿ 'ವಿದ್ಯಾರ್ಥಿ ಭವನ': ಆದ್ರೆ ನೀವಂದ್ಕೊಂಡಂಗಲ್ಲ...
ಕಳೆದ ವಾರ ವಿದ್ಯಾರ್ಥಿ ಭವನ ಹೊಟೇಲ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. ಮಲ್ಲೇಶ್ವರದಲ್ಲಿ ಶೀಘ್ರವೇ ಶಾಖೆ ಆರಂಭ ಎಂದು ಘೋಷಣೆ ಮಾಡಿದ್ದು ಅದಕ್ಕೆಲ್ಲಾ ಕಾರಣ, ಆದರೆ ಈ ಸುದ್ದಿಗೆ ಈಗ ನಾಟಕೀಯ ಟ್ವಿಸ್ಟ್ ಸಿಕ್ಕಿದೆ.
Published: 23rd April 2022 02:28 PM | Last Updated: 23rd April 2022 02:55 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ವಾರ ವಿದ್ಯಾರ್ಥಿ ಭವನ ಹೊಟೇಲ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. ಮಲ್ಲೇಶ್ವರದಲ್ಲಿ ಶೀಘ್ರವೇ ಶಾಖೆ ಆರಂಭ ಎಂದು ಘೋಷಣೆ ಮಾಡಿದ್ದು ಅದಕ್ಕೆಲ್ಲಾ ಕಾರಣ, ಆದರೆ ಈ ಸುದ್ದಿಗೆ ಈಗ ನಾಟಕೀಯ ಟ್ವಿಸ್ಟ್ ಸಿಕ್ಕಿದೆ. ಅದು ವಿದ್ಯಾರ್ಥಿ ಭವನ ಹೊಟೇಲ್ ಅಲ್ಲ, ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕ.
ಕೆಲವೊಮ್ಮೆ ನಾಟಕ ಬಗ್ಗೆ ಪ್ರಚಾರ ಮಾಡಲು ಇಂತಹ ತಂತ್ರವನ್ನೂ ಅನುಸರಿಸಬೇಕಾುಗುತ್ತದೆ, ಅನುಸರಿಸುತ್ತಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಬಸವನಗುಡಿಯ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನವೆಂದರೆ ಬೆಂಗಳೂರಿಗರಿಗೆ ಚಿರಪರಿಚಿತ. ವಾರಾಂತ್ಯದಲ್ಲಿ ಇಲ್ಲಿಗೆ ಹೋಗಿ ಬೆಣ್ಣೆ ಹಚ್ಚಿದ ಬಿಸಿಬಿಸಿ ಮಸಾಲೆ ದೋಸೆ ಸವಿಯುವುದೆಂದರೆ ಎಲ್ಲರಿಗೂ ಖುಷಿಯೇ. ಇಂತಹ ವಿದ್ಯಾರ್ಥಿ ಭವನ ಮಲ್ಲೇಶ್ವರಕ್ಕೆ ಕಾಲಿಡುತ್ತಿದೆ ಎಂದಾಗ ಇಲ್ಲಿನ ಸುತ್ತಮುತ್ತಲ ನಿವಾಸಿಗಳಿಗೆ ಬಹಳ ಖುಷಿಯಾಗಿತ್ತು. ಇದರಿಂದ ಮಲ್ಲೇಶ್ವರದ ಖ್ಯಾತ ತಿಂಡಿ ಅಡ್ಡಗಳಾದ ಸಿಟಿಆರ್, ವೀಣಾ ಸ್ಟೋರ್ ಗಳಿಗೆ ವಿದ್ಯಾರ್ಥಿ ಭವನದಿಂದ ಹೊಡೆತ ಬೀಳಬಹುದು ಎಂದು ಸಹ ಮಸಾಲೆ ದೋಸೆಯಷ್ಟೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿತ್ತು.
ಇದನ್ನೂ ಓದಿ: ಮಲ್ಲೇಶ್ವರದಲ್ಲಿ 'ವಿದ್ಯಾರ್ಥಿ ಭವನ' ಆರಂಭ: ಹೊಟೇಲ್ ಮಾಲೀಕರು ಏನಂತಾರೆ?
ನಾಗರಿಕರು ಅಂದುಕೊಂಡಂತೆ ಮಲ್ಲೇಶ್ವರಕ್ಕೆ ವಿದ್ಯಾರ್ಥಿ ಭವನ ಬರುತ್ತಿದೆ. ಆದರೆ ಅದು ಹೊಟೇಲ್ ಅಲ್ಲ, ಬದಲಿಗೆ ನಾಟಕ, ಮೇ 6ರಿಂದ 8ರವರೆಗೆ ಮೂರು ದಿನ ನಾಟಕ ಪ್ರದರ್ಶನಗೊಳ್ಳಲಿದ್ದು ನೋಡಲಿಚ್ಛಿಸುವವರು ಬುಕ್ ಮೈ ಶೋದಲ್ಲಿ(Book my show) ಟಿಕೆಟ್ ಖರೀದಿಸಬಹುದು.
ಬೆಂಗಳೂರು ಥಿಯೇಟರ್ ಫೌಂಡೇಶನ್ ಸಹಯೋಗದಲ್ಲಿ ಈ ನಾಟಕವು ಬಸವನಗುಡಿಯ ಕಥೆಗಳು ಮತ್ತು ವಿದ್ಯಾರ್ಥಿ ಭವನವನ್ನು ರೂಪಿಸಿದ ಘಟನೆಗಳನ್ನು ನಿರೂಪಿಸುತ್ತದೆ. ರಾಜೇಂದ್ರ ಕಾರಂತರ ಚಿತ್ರಕಥೆಯಲ್ಲಿ ಅರ್ಜುನ್ ಕಬ್ಬಿನ ನಿರ್ದೇಶನದ 90 ನಿಮಿಷಗಳ ಪ್ರದರ್ಶನವು ಬಸವನಗುಡಿಯ ಸಾಂಸ್ಕೃತಿಕ ಲೋಕವನ್ನು ವಿದ್ಯಾರ್ಥಿ ಭವನದ ಪ್ರಿಸ್ಮ್ ಮೂಲಕ ಪ್ರತಿನಿಧಿಸುವ ಪ್ರಯತ್ನವಾಗಿದೆ. ಕಲಾವಿದರಲ್ಲಿ ಸಿಹಿ ಕಹಿ ಚಂದ್ರು, ಸುಂದರ್ ವೀಣಾ, ಪವನ್ ಕುಲಕರ್ಣಿ ಸೇರಿದ್ದಾರೆ.