
ಯಡಿಯೂರಪ್ಪ
ಶಿವಮೊಗ್ಗ: ಸೋಗಾನೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ನಯವಾಗಿ ಮನವಿ ಮಾಡಿದ್ದು, ಈಗ ಇತರ ಪ್ರಮುಖರ ಹೆಸರುಗಳು ಕೇಳಿಬರುತ್ತಿವೆ.
ಆಫ್ಲೈನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸೂಚಿಸಲಾದ ಹೆಸರುಗಳಲ್ಲಿ ಕೆಳದಿ ದೊರೆಗಳಾದ ಶಿವಪ್ಪ ನಾಯಕ ಮತ್ತು ಕೆಳದಿ ಚನ್ನಮ್ಮ, ಜಿಲ್ಲೆಯಲ್ಲಿ ಜನಿಸಿದ 12ನೇ ಶತಮಾನದ ಸಮಾಜ ಸುಧಾರಕರಾದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ, ಬಿ ಆರ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ಸರ್ ಎಂ ವಿಶ್ವೇಶ್ವರಯ್ಯ, ಸಿದ್ದಗಂಗಾ ಮಠದ ಪೀಠಾಧಿಪತಿ ದಿವಂಗತ. ಶಿವಕುಮಾರ ಸ್ವಾಮಿ ಸೇರಿದಂತೆ ಮತ್ತಿತರರ ಹೆಸರುಗಳು ಹರಿದಾಡುತ್ತಿವೆ.
ಇದನ್ನು ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಸಿಎಂ ಬೊಮ್ಮಾಯಿಗೆ ಬಿಎಸ್ ಯಡಿಯೂರಪ್ಪ ಪತ್ರ!
ಈ ಜಿಲ್ಲೆಯನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯುವುದರಿಂದ ವಿಮಾನ ನಿಲ್ದಾಣಕ್ಕೆ ಮಲೆನಾಡು ಎಂದು ಹೆಸರಿಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣ ಎಂಬ ಹೆಸರನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ತವರು ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭಾನುವಾರ ಪತ್ರ ಬರೆದಿರುವ ಬಿಎಸ್ ವೈ, ಶಿವಮೊಗ್ಗ ಜಿಲ್ಲೆಯಲ್ಲಿ ಬಹುದಿನಗಳ ಕನಸಾದ ವಿಮಾನ ನಿಲ್ದಾಣವು ಈಗ ನನಸಾಗುತ್ತಿರುವುದಕ್ಕೆ ಬೊಮ್ಮಾಯಿ ಅವರಿಗೆ ಧನ್ಯವಾದ ಅರ್ಪಿಸಿದ್ದು, ಹೊಸ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಕೇಳಿಕೊಂಡಿದ್ದಾರೆ.