
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಮಾದಾವರದ ನಾಡಗೀರ್ ಕಾಲೇಜ್ ಬಳಿ 10 ಮಂದಿ ಕೇರಳ ಮೂಲದ ದರೋಡೆಕೋರರನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಆಭರಣ ವ್ಯಾಪಾರಿ 60 ವರ್ಷದ ಅಕೌಂಟೆಂಟ್ ನೀಡಿದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ತುಮಕೂರು ಹೆದ್ದಾರಿಯಲ್ಲಿ10 ಮಂದಿ ಕೇರಳ ಮೂಲದ ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ.
ಈ ಗ್ಯಾಂಗ್ ಕೇರಳದಿಂದ ಎಸ್ಯುವಿ ಬಾಡಿಗೆಗೆ ಪಡೆದು ವಾಹನಗಳ ನಂಬರ್ ಪ್ಲೇಟ್ ಬದಲಾಯಿಸುವ ಮೂಲಕ ರಾಜ್ಯಾದ್ಯಂತ ಡಕಾಯಿತಿಗಳನ್ನು ನಡೆಸುತ್ತದೆ. ಸಂತ್ರಸ್ತರಿಂದ 1 ಕೋಟಿ ರೂಪಾಯಿ ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದರು.
ಹೆದ್ದಾರಿ, ಟೋಲ್ ಪ್ಲಾಜಾಗಳಲ್ಲಿನ 250ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. “ದೂರುದಾರರ ಕಾರನ್ನು ದರೋಡೆಕೋರರ ಗ್ಯಾಂಗ್ ಬೆಂಗಳೂರು-ಹಾಸನ ರಸ್ತೆಯಲ್ಲಿ ಬಿಟ್ಟು ಹೋಗಿತ್ತು. ನಂತರ ನಾಗಮಂಗಲ, ಮೈಸೂರು, ಚಾಮರಾಜನಗರ ಮಾರ್ಗವಾಗಿ ದರೋಡೆಕೋರರ ಗ್ಯಾಂಗ್ ಸಂಚರಿಸಿದೆ.
ಚಾಮರಾಜನಗರ ಟೋಲ್ ಪ್ಲಾಜಾದಲ್ಲಿ ಎಸ್ಯುವಿ ನೋಂದಣಿ ಸಂಖ್ಯೆಯನ್ನು ಕರ್ನಾಟಕ ಆರ್ಟಿಒದಿಂದ ಕೇರಳ ಆರ್ಟಿಒ ಎಂದು ಬದಲಾಯಿಸಿದ್ದಾರೆ. ತಂಡವು ನಂತರ ಕೊಯಮತ್ತೂರು, ಪಾಲಕ್ಕಾಡ್, ಎರ್ನಾಕುಲಂ ಮತ್ತು ಕೇರಳದ ಇತರ ಸ್ಥಳಗಳಿಗೆ ತೆರಳಿ ಗ್ಯಾಂಗ್ನ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಕೇರಳ ಮೂಲದ ಶ್ರೀಧರ್ ಅಲಿಯಾಸ್ ಕೊಡಾಲಿ ಶ್ರೀಧರ್ ಎಂಬಾತ 90 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾನೆ. ಮಾರ್ಚ್ 11 ರಂದು ಬೆಳಿಗ್ಗೆ 6.10 ರಿಂದ 6.15 ರ ನಡುವೆ ಆರೋಪಿಗಳು ಕನ್ಯಾಕುಮಾರಿಯ ಕೋಣಂ ಗ್ರಾಮದ ಅಕೌಂಟೆಂಟ್ ಜೆ ಫ್ರಾಂಕ್ಲಿನ್ ಅವರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಹುಬ್ಬಳ್ಳಿಯಲ್ಲಿ ಚಿನ್ನಾಭರಣ ಖರೀದಿದಾರರಿಂದ ನಗದು ಸಂಗ್ರಹಿಸಿ ಹಿಂದಿರುಗುತ್ತಿದ್ದಾಗ ದರೋಡೆ ಮಾಡಿದ್ದರು. ಫ್ರಾಂಕ್ಲಿನ್ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳಿಂದ ಎರಡು ಎಸ್ಯುವಿಗಳು ಮತ್ತು 9.7 ಲಕ್ಷ ರೂಪಾಯಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.