ಪಿಎಸ್‌ಐ ನೇಮಕಾತಿ ಹಗರಣ: ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ಆಕ್ಷೇಪ
ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಐವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಪಿಎಸ್‌ಐ ಸಿಇಟಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ಆಕ್ಷೇಪಣೆ ಸಲ್ಲಿಸಿದೆ.
Published: 26th April 2022 08:37 AM | Last Updated: 26th April 2022 01:52 PM | A+A A-

ಸಂಗ್ರಹ ಚಿತ್ರ
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಐವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಪಿಎಸ್‌ಐ ಸಿಇಟಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ಆಕ್ಷೇಪಣೆ ಸಲ್ಲಿಸಿದೆ.
ಕಲಬುರಗಿ ಜಿಲ್ಲಾ ಮಹಿಳಾ ಮೋರ್ಚಾ ಮಾಜಿ ಮುಖ್ಯಸ್ಥೆ ದಿವ್ಯಾ ಹಾಗರಗಿ ಹಾಗೂ ಅವ್ಯವಹಾರ ನಡೆದಿರುವ ಜ್ಞಾನ ಗಂಗಾ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕಾಶಿನಾಥ, ಮಂಜುನಾಥ ಮೇಳಕುಂದಿ, ಅರ್ಚನಾ, ಸುನಂದಾ ಶುಕ್ರವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಬೆನ್ನಲ್ಲೇ ಪಿಡಬ್ಲ್ಯುಡಿ ಜೆಇ ಪರೀಕ್ಷೆಯ ಅಕ್ರಮ ವಿಡಿಯೊ ಬಿಡುಗಡೆ: ಅಭ್ಯರ್ಥಿಗಳಲ್ಲಿ ಆತಂಕ
ಅವರ ಈ ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಐಡಿ, ಆರೋಪಿಗಳು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಮತ್ತು ತನಿಖಾ ಸಂಸ್ಥೆಯೊಂದಿಗೆ ಸಹಕರಿಸದ ಕಾರಣ ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆಗಳಿವೆ ಎಂದು ಹೇಳಿದೆ.
ಈ ಹಿಂದೆ ನ್ಯಾಯಾಲಯದ ಸರಕಾರಿ ವಕೀಲರ ಕೋರಿಕೆಯ ಮೇರೆಗೆ ಸಾಮಾನ್ಯ ಸರಕಾರಿ ಅಭಿಯೋಜಕರು ರಜೆಯಲ್ಲಿರುವ ಕಾರಣ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಲಯ ಬುಧವಾರದವರೆಗೆ ಕಾಲಾವಕಾಶ ನೀಡಿತ್ತು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್
ಈ ಮಧ್ಯೆ, ಡಿಜಿಪಿ (ಸಿಐಡಿ) ಪವನಜೀತ್ ಸಿಂಗ್ ಸಂಧು ಸೋಮವಾರ ಕಲಬುರಗಿಗೆ ಭೇಟಿ ನೀಡಿ ಹಗರಣದ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಈಶಾನ್ಯ ವಲಯದ ಐಜಿಪಿ ಮನೀಶ್ ಖಾರ್ಬಿಕರ್, ಪೊಲೀಸ್ ಆಯುಕ್ತ ರವಿಕುಮಾರ್, ಎಸ್ಪಿ ಇಶಾ ಪಂತ್ ಮತ್ತು ಪಿಎಸ್ಐ ಸಿಇಟಿ ಹಗರಣದ ತನಿಖಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಆಶ್ರಯ ನೀಡಲು ಅಥವಾ ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆರ್‌ಡಿ ಪಾಟೀಲ್ ವಿಚಾರಣೆಯ ವೇಳೆ ಕೋವಿಡ್‌ನಿಂದ ಸಾವನ್ನಪ್ಪಿದ್ದ ನೌಕರನೊಬ್ಬನ ಮೊಬೈಲ್ ಫೋನ್ ಅನ್ನು ಅಭ್ಯರ್ಥಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಲು ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.