ಕಮಿಷನ್ ಭ್ರಷ್ಟಾಚಾರ, ಹಗರಣಗಳ ಆರೋಪ ನಡುವೆಯೇ ಇನ್ನೂ ಖಾಲಿ ಇದೆ 'ಕರ್ನಾಟಕ ಲೋಕಾಯುಕ್ತ' ಹುದ್ದೆ!
ಭ್ರಷ್ಟಾಚಾರ, ಹಗರಣಗಳ ಆರೋಪಗಳ ನಡುವೆಯೂ ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವ ಮನಸನ್ನು ರಾಜ್ಯ ಸರ್ಕಾರ ಮಾಡಿದಂತೆ ಕಾಣುತ್ತಿಲ್ಲ...
Published: 26th April 2022 03:46 PM | Last Updated: 26th April 2022 04:01 PM | A+A A-

ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಭ್ರಷ್ಟಾಚಾರ, ಹಗರಣಗಳ ಆರೋಪಗಳ ನಡುವೆಯೂ ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವ ಮನಸನ್ನು ರಾಜ್ಯ ಸರ್ಕಾರ ಮಾಡಿದಂತೆ ಕಾಣುತ್ತಿಲ್ಲ...
ಹೌದು.. ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರ ಅವಧಿ ಜನವರಿ 27, 2022 ರಂದು ಕೊನೆಗೊಂಡಾಗಿನಿಂದ ಕರ್ನಾಟಕ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದಿದೆ. ಸುಮಾರು ಮೂರು ತಿಂಗಳಿನಿಂದ ಖಾಲಿ ಇರುವ ಲೋಕಾಯುಕ್ತ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ತನ್ನ ವ್ಯಾಪ್ತಿಯಲ್ಲಿನ ಕಲಾಪವನ್ನು ಸ್ಥಗಿತಗೊಳಿಸಿದ್ದಲ್ಲದೆ, ನೇಮಕಾತಿ ವಿಳಂಬದ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.
ತನಿಖಾ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲು ಅಥವಾ ತನಿಖಾ ವರದಿಗಳನ್ನು ಅನುಮೋದಿಸಲು ಲೋಕಾಯುಕ್ತರು ಇಲ್ಲದಿರುವುದರಿಂದ ಅಧಿಕಾರಿಗಳು, ಉನ್ನತ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಹಲವಾರು ಪ್ರಕರಣಗಳಲ್ಲಿ ಪ್ರಕ್ರಿಯೆಗಳು ಪೂರ್ಣಗೊಳ್ಳದೇ ಸ್ಥಗಿತಗೊಂಡಿವೆ ಎಂದು ಮೂಲಗಳು ತಿಳಿಸಿವೆ. ನಿವೃತ್ತಿಯ ಅಂಚಿನಲ್ಲಿರುವ ಕಳಂಕಿತ ಅಧಿಕಾರಿಗಳು ಅಥವಾ ಅವಧಿ ಮುಗಿಯುತ್ತಿರುವ ಚುನಾಯಿತ ಪ್ರತಿನಿಧಿಗಳು ಯಾವುದೇ ವಿಳಂಬವಾದರೆ ಕಾನೂನಿನ ಹಿಡಿತದಿಂದ ಪಾರಾಗಬಹುದು ಎಂದು ಹೇಳಲಾಗಿದೆ. ಮತ್ತೊಂದೆಡೆ, ವಿಚಾರಣೆಯಲ್ಲಿ ಆರೋಪ ಸಾಬೀತಾಗದಿದ್ದಲ್ಲಿ, ಲೋಕಾಯುಕ್ತರು ವರದಿಗಳನ್ನು ತೆರವುಗೊಳಿಸದ ಕಾರಣ, ಅವರ ಬಡ್ತಿ ಅಥವಾ ನಿವೃತ್ತಿ ಪ್ರಯೋಜನಗಳನ್ನು ತಡೆಹಿಡಿಯುವುದರಿಂದ ಸಾರ್ವಜನಿಕ ನೌಕರರು ತೊಂದರೆ ಅನುಭವಿಸುತ್ತಾರೆ.
ಅದಲ್ಲದೆ, ಈ ಪಟ್ಟಿಯಲ್ಲಿ ಸರ್ಕಾರಿ ಕೆಲಸಗಳನ್ನು ಪಡೆಯಲು 40 ಪರ್ಸೆಂಟ್ ಕಮಿಷನ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಬಯಸುವವರು ಇರಬಹುದು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು, ಲೋಕಾಯುಕ್ತ ಸಂಸ್ಥೆ ದುರ್ಬಲಗೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎರಡರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುವ ಪ್ರಮುಖ ಅಧಿಕಾರಗಳಲ್ಲಿ ಒಂದನ್ನು ಬಹಳ ಹಿಂದೆಯೇ ಹಿಂಪಡೆಯಲಾಗಿದೆ. ಲೋಕಾಯುಕ್ತ ಹುದ್ದೆ ಖಾಲಿಯಾಗಿ ತಿಂಗಳುಗಳೇ ಕಳೆದರೂ ಯಾವ ರಾಜಕೀಯ ಪಕ್ಷವೂ ಚಕಾರ ಎತ್ತಲಿಲ್ಲ. ಇದರಿಂದ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿದಂತಾಗಿದೆ. ಹುದ್ದೆ ಭರ್ತಿಯಾದರೆ ಅಧಿಕಾರದಲ್ಲಿರುವವರಿಗೆ ಹೊರೆಯಾಗುತ್ತದೆ ಎಂಬ ಭೀತಿ ಅವರಲ್ಲಿದೆ ಎಂದರು.
ಇನ್ನು ಲೋಕಾಯುಕ್ತರ ಅಧಿಕಾರಾವಧಿಯು ನೇಮಕಾತಿ ದಿನಾಂಕದಿಂದ ಐದು ವರ್ಷಗಳವರೆಗೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿದಿದೆ ಮತ್ತು ನೇಮಕಾತಿ ಪ್ರಕ್ರಿಯೆಯು ಮುಂಚಿತವಾಗಿ ಪ್ರಾರಂಭಿಸಿದರೆ, ಹುದ್ದೆಯನ್ನು ಖಾಲಿ ಇಡಲು ಅವಕಾಶವಿಲ್ಲ. ಇದೂ ಕೂಡ ಸರ್ಕಾರದ ವಿಳಂಬ ನೀತಿಗೆ ಕಾರಣ ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಲೋಕಾಯುಕ್ತರನ್ನು ನೇಮಕ ಮಾಡಿದ್ದರೆ, 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣವನ್ನು ಪ್ರಾರಂಭಿಸಬಹುದಿತ್ತು. ಆದರೆ ಸರ್ಕಾರ ತನಿಖಾ ಆಯೋಗವನ್ನು ನೇಮಿಸಿತು. ಬ್ರಿಟನ್ನಿನ ಮಾಜಿ ಪ್ರಧಾನಿಯೊಬ್ಬರು, ‘ನೀವು ಹಗರಣವನ್ನು ಮುಚ್ಚಲು ಬಯಸಿದರೆ, ತನಿಖಾ ಆಯೋಗವನ್ನು ನೇಮಿಸಿ’ ಎಂಬ ಹೇಳಿಕೆಯನ್ನು ಇದು ನನಗೆ ನೆನಪಿಸುತ್ತದೆ. ಲೋಕಾಯುಕ್ತರ ನೇಮಕ ಪ್ರಕ್ರಿಯೆ ಕುರಿತು ಹಲವು ಬಾರಿ ಮನವಿ ಮಾಡಿದರೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಂದಿಸಿಲ್ಲ ಎನ್ನಲಾಗಿದೆ.