ಸರ್ಕಾರದ ಆದೇಶವಿದ್ದರೂ ಕ್ಯಾರೇ ಎನ್ನದೆ ಜನ: ಬೆಂಗಳೂರು ರಸ್ತೆಗಳಲ್ಲಿ ಮಾಸ್ಕ್ ಇಲ್ಲದೆ ಓಡಾಟದ ದೃಶ್ಯ ಸಾಮಾನ್ಯ!
ಸರ್ಕಾರ ಕೊರೋನಾ 4ನೇ ಅಲೆ ತಡೆಗೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯದ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶಕ್ಕೂ ನಮಗೂ ಸಂಬಂಧವಿಲ್ಲದಂತೆ ಜನರು ವರ್ತನೆ ತೋರುತ್ತಿರುವುದು ಕಂಡು ಬರುತ್ತಿದೆ.
Published: 27th April 2022 12:30 PM | Last Updated: 27th April 2022 01:34 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸರ್ಕಾರ ಕೊರೋನಾ 4ನೇ ಅಲೆ ತಡೆಗೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯದ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶಕ್ಕೂ ನಮಗೂ ಸಂಬಂಧವಿಲ್ಲದಂತೆ ಜನರು ವರ್ತನೆ ತೋರುತ್ತಿರುವುದು ಕಂಡು ಬರುತ್ತಿದೆ.
ರಾಜ್ಯದ ಇದರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ನಗರದಲ್ಲಿ ಪ್ರಸ್ತುತ 1,610 ಸಕ್ರಿಯ ಪ್ರಕರಣಗಳಿವೆ. ನಾಲ್ಕನೇ ಅಲೆ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಮಾಸ್ಕ್ ಕಡ್ಡಾಯಗೊಳಿಸಿದೆ. ಆದರೆ, ದಂಡ ವಿಧಿಸದಿರಲು ಆದೇಶಿಸಿದೆ. ಸರ್ಕಾರ ದಂಡ ವಿಧಿಸದ ಹಿನ್ನೆಲೆಯಲ್ಲಿ ಶೇ.95ರಷ್ಟು ಜನರು ಸರ್ಕಾರದ ಆದೇಶಕ್ಕೆ ಕ್ಯಾರೇ ಏನ್ನದೆ ರಸ್ತೆಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಕಂಡು ಬಂದಿದೆ. ಹಲವರು ಪಾಕೆಟ್, ಪರ್ಸ್ ಗಳಲ್ಲಿ ಮಾಸ್ಕ್ ಇಟ್ಟುಕೊಂಡಿರುವುದು ಹಾಗೂ ಮೂಗಿನಿಂದ ಕೆಳಗೆ ಮಾಸ್ಕ್ ಧರಿಸುತ್ತಿರುವುದು ಕಂಡು ಬಂದಿದೆ.
ಇನ್ನು ವಾಹನ ಚಾಲಕರು ಹಾಗೂ ಅಂಗಡಿಗಳ ಮಾಲೀಕರು ವ್ಯವಹಾರ ನಡೆಸುತ್ತಿರುವ ಸಂದರ್ಭದಲ್ಲಿ ನೂರಾರು ಜನರಿದ್ದರೂ ಮಾಸ್ಕ್ ಧರಿಸುತ್ತಿಲ್ಲ.
ಮಾಸ್ಕ್ ಧರಿಸಿದಿರುವ ಕುರಿತು ಆಟೋ ಚಾಲಕ ಸೈಫುಲ್ಲಾ ಎಂಬುವವರನ್ನು ಪ್ರಶ್ನಿಸಿದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರೂ ಕೂಡ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ.
ಮೈಸೂರಿನಿಂದ ಬೆಂಗಳೂರಿಗೆ ಬರಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮೀ ಎಂಬ ಪ್ರಯಾಣಿಕರನ್ನು ಪ್ರಶ್ನಿಸಿದರೆ, ಮಾಸ್ಕ್ ಬ್ಯಾಗ್ ನಲ್ಲಿದೆ ಎಂದು ಹೇಳಿದ್ದಾರೆ. ಪ್ರಶ್ನೆ ಮಾಡುತ್ತಿದ್ದಂತೆಯೇ ಬ್ಯಾಗ್ ನಲ್ಲಿದ್ದ ಮಾಸ್ಕ್ ತೆಗೆದು ಹಾಕಿಕೊಂಡರು.
ಮಾಸ್ಕ್ ಧರಿಸಿದರೆ ಉಸಿರುಗಟ್ಟಿದ ಅನುಭವವಾಗುತ್ತದೆ. ಪ್ರಮುಖವಾಗಿ ಬೇಸಿಗೆ ಸಂದರ್ಭದಲ್ಲಿ. ಮಾಸ್ಕ್ ಕಡ್ಡಾಯಗೊಳಿಸಿರುವ ಆದೇಶದ ಕುರಿತು ಕೇಳಿದ್ದೇನೆ. ಆದರೆ, ಸಾಕಷ್ಟು ಜನರಿಗೆ ಮಾಹಿತಿ ಇಲ್ಲ ಎಂದು ಕುಸುಮಾ ಎಂಬುವವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಎರಡು ವರ್ಷಗಳಲ್ಲಿ ಮಾರ್ಚ್ 2020 ರಿಂದ ಮಾರ್ಚ್ 6, 2022 ರವರೆಗೆ - ಬಿಬಿಎಂಪಿ ಮಾರ್ಷಲ್ಗಳು ಒಟ್ಟು 6,83,820 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದು, ಬೆಂಗಳೂರು ನಗರ ವೊಂದರಲ್ಲಿಯೇ ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಜನರಿಂದ 16,52,64,799 ರೂ ಸಂಗ್ರಹಿಸಿದ್ದಾರೆ.
ಮಾಸ್ಕ್ ಧರಿಸದಿದ್ದಕ್ಕಾಗಿ 6,49,888 ಪ್ರಕರಣಗಳು ದಾಖಲಾಗಿದ್ದು, ರೂ.15,74,85,380 ದಂಡ ಸಂಗ್ರಹಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಕ್ಕಾಗಿ 33,883 ಪ್ರಕರಣಗಳು ದಾಖಲಾಗಿದ್ದು, 77,67,935 ರೂ ದಂಡ ಸಂಗ್ರಹಿಸಲಾಗಿದೆ.
ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಮೊದಲು ಜಾಗೃತಿ ಮೂಡಿಸಿ ಮಾಸ್ಕ್ ಧರಿಸುವಂತೆ ಜನರ ಮನವೊಲಿಸಲು ಪ್ರಯತ್ನಿಸಲಾಗುತ್ತದೆ. ಇದಾದ ನಂತರ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.