ಬೈಬಲ್ ಬೋಧನೆ: ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ ನೋಟಿಸ್ ಜಾರಿ
ಪಠ್ಯಕ್ರಮದ ಭಾಗವಾಗಿ ಬೈಬಲ್ ಅನ್ನು ಅಧ್ಯಯನ ಮಾಡಲು ಒತ್ತಾಯಿಸಿದ್ದಕ್ಕಾಗಿ ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಂಗಳವಾರ ಹೇಳಿದ್ದಾರೆ.
Published: 27th April 2022 08:21 AM | Last Updated: 27th April 2022 01:30 PM | A+A A-

ಬಿಸಿ ನಾಗೇಶ್
ಬೆಂಗಳೂರು: ಪಠ್ಯಕ್ರಮದ ಭಾಗವಾಗಿ ಬೈಬಲ್ ಅನ್ನು ಅಧ್ಯಯನ ಮಾಡಲು ಒತ್ತಾಯಿಸಿದ್ದಕ್ಕಾಗಿ ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯ ವರ್ತನೆಯಿಂದ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಶಾಲೆಗಳಲ್ಲಿ ಧಾರ್ಮಿಕ ವಿಚಾರ ಬೋಧನೆ ಮಾಡುವಂತಿಲ್ಲ. ಹೀಗಾಗಿ ಶಾಲೆಯ ವಿರುದ್ಧ ನೊಟೀಸ್ ಜಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ನೋಂದಣಿಯಾಗಿರುವ ಯಾವುದೇ ಶಿಕ್ಷಣ ಸಂಸ್ಥೆಗಳು ಕರ್ನಾಟಕ ಶಿಕ್ಷಣ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಮತ್ತು ಪಠ್ಯಕ್ರಮದ ಭಾಗವಾಗಿ ಧಾರ್ಮಿಕ ಪುಸ್ತಕವನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಸಂಸ್ಥೆಯಲ್ಲಿ ಬೈಬಲ್ ಕಡ್ಡಾಯ ಆರೋಪ; ಹಿಂದೂ ಸಂಘಟನೆಗಳ ಆಕ್ರೋಶ, ಕ್ರಮದ ಭರವಸೆ ನೀಡಿದ ಶಿಕ್ಷಣ ಸಚಿವ!!
ಬೈಬಲ್ ಅನ್ನು ತಮ್ಮ ಪಠ್ಯಕ್ರಮದ ಭಾಗವಾಗಿಸುವ ಬಗ್ಗೆ ವೆಬ್ಸೈಟ್ನಲ್ಲಿ ಉಲ್ಲೇಖಿಸಿದ್ದಾರೆ, ಇದಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದ್ದು, ನೋಟಿಸ್'ಗೆ ಉತ್ತರ ನೀಡಬೇಕಿದೆ ಎಂದಿದ್ದಾರೆ.
ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಲಾ ಅಧಿಕಾರಿಗಳು, ಕಾನೂನು ಪಾಲನೆ ಮಾಡುವುದಾಗಿ ಹಾಗೂ ಸಮಸ್ಯೆ ಇತ್ಯರ್ಥಪಡಿಸಲು ವಕೀಲರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಶಾಲಾ ಆಡಳಿತವು ತನ್ನ ವೆಬ್ಸೈಟ್ನಲ್ಲಿ ಕ್ಲಾರೆನ್ಸ್ ಹೈಸ್ಕೂಲ್, ಸಂಪ್ರದಾಯ, ಶ್ರೇಷ್ಠತೆ ಮತ್ತು ಗುಣಮಟ್ಟದ ಕ್ರಿಶ್ಚಿಯನ್ ಶಿಕ್ಷಣದ ವಿಶಿಷ್ಟ ಮಿಶ್ರಣವಾಗಿದೆ ಎಂದು ಪ್ರಕಟಿಸಿದೆ. ಕಳೆದ 100 ವರ್ಷಗಳಿಂದ, ಕ್ಲಾರೆನ್ಸ್ ಹೈಸ್ಕೂಲ್ ಉನ್ನತ ಗುಣಮಟ್ಟದ ಬೈಬಲ್ ಆಧಾರಿತ ಶಿಕ್ಷಣವನ್ನು ನೀಡುವ ಮೂಲಕ ಬೆಂಗಳೂರು ನಗರದ ಸಮುದಾಯಕ್ಕೆ ಉತ್ತಮ ಸೇವೆಯನ್ನು ಒದಗಿಸಿದೆ.