ಕೊರೋನಾ 4ನೇ ಅಲೆ ಆತಂಕ: ನಗರದಲ್ಲಿ 3 'ಟಿ' ಸೂತ್ರ ತೀವ್ರಗೊಳಿಸಿದ ಅಧಿಕಾರಿಗಳು!
ಕೊರೋನಾ 4ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು 3 ಟಿ ಸೂತ್ರಗಳತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಡಾ ಕೆ ವಿ ತ್ರಿಲೋಕ್ ಚಂದ್ರ ಅವರು ಮಂಗಳವಾರ ಹೇಳಿದ್ದಾರೆ.
Published: 27th April 2022 01:44 PM | Last Updated: 27th April 2022 02:24 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೊರೋನಾ 4ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು 3 ಟಿ ಸೂತ್ರಗಳತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಡಾ ಕೆ ವಿ ತ್ರಿಲೋಕ್ ಚಂದ್ರ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ ಇದೆ. ಸೋಂಕಿತ ಪ್ರಕರಣಗಳು ಏರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚಿನ ಜನರಿಗೆ ಲಸಿಕೆ ನೀಡುವತ್ತ ಗಮನಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
3 ಲಕ್ಷ ಜನರಿನ್ನೂ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಜನರ ಮನೆ ಬಾಗಿಲಿಗೇ ತೆರಳಿ ಲಸಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಕಳೆದ 2 ತಿಂಗಳಿನಲ್ಲಿ 7 ಲಕ್ಷ ಜನರಿಗೆ ಅವರ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಸರ್ಕಾರದ ಆದೇಶವಿದ್ದರೂ ಕ್ಯಾರೇ ಎನ್ನದೆ ಜನ: ಬೆಂಗಳೂರು ರಸ್ತೆಗಳಲ್ಲಿ ಮಾಸ್ಕ್ ಇಲ್ಲದೆ ಓಡಾಟದ ದೃಶ್ಯ ಸಾಮಾನ್ಯ!
ಪರಿಸ್ಥಿತಿ ನೋಡಿಕೊಂಡು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಮಾಡಲಾಗುತ್ತದೆ. ಈಗಾಗಲೇ ಕೋವಿಡ್ ಪರೀಕ್ಷೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಹೆಚ್ಚಿಸಲಾಗಿದೆ. ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆ ಹಾಗೂ ಇತರೆ ಪ್ರದೇಶಗಳಲ್ಲಿನ ಜನರ ಮೇಲೆ ಪೊಲೀಸರು ಹಾಗೂ ಮಾರ್ಷಲ್ ಗಳು ಕಣ್ಣಿಟ್ಟಿದ್ದಾರೆ. ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟ್ರಯಾಜಿಂಗ್ ಹಾಗೂ ಟೆಲಿ-ಟ್ರಯಾಜಿಂಗ್, ಸ್ಯಾಂಪಲ್ ಸಂಗ್ರಹ, ಆಸ್ಪತ್ರೆಗೆ ದಾಖಲಾಗುವವರ ಆರೈಕೆ, ಪರೀಕ್ಷೆ, ಸ್ವ್ಯಾಬ್ ಸಂಗ್ರಹ, ಡಾಟಾ ಎಂಟ್ರಿ, ಲಸಿಕೆ, ಹೋಂ ಐಸೋಲೇಷನ್ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳ ಅಗತ್ಯವಿದ್ದು, ಈ ಕುರಿತು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೊರೋನಾ ನಾಲ್ಕನೇ ಅಲೆಯಲ್ಲೂ ಲಕ್ಷಣಗಳು ಒಂದೇ ರೀತಿ ಇರಲಿದೆ ಎಂದಿದ್ದಾರೆ.