
ಐಪಿಎಸ್ ಅಧಿಕಾರಿ ಅಮೃತ್ ಪೌಲ್
ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಕಾತಿ ವಿಭಾಗದ ಎಜಿಡಿಪಿ ಅಮೃತ್ ಪೌಲ್ ರನ್ನು ವರ್ಗಾವಣೆ ಮಾಡಿದೆ.
1995 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದಿಂದ ಆಂತರಿಕ ಭದ್ರತಾ ದಳದ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಇನ್ನು ನೇಮಕಾತಿ ವಿಭಾಗದ ನೂತನ ಎಡಿಜಿಪಿ ಆಗಿ ಆರ್ ಹಿತೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದ್ದು ಹಿತೇಂದ್ರ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಅಮೃತ್ ಪೌಲ್ ಅವರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ಅಮೃತ್ ಪೌಲ್ ರನ್ನು ವರ್ಗಾವಣೆ ಮಾಡಲಾಗಿದೆ.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಾರಾಷ್ಟ್ರದ ಪುಣೆ ಹೊರವಲಯದಲ್ಲಿ ಅಡಗಿದ್ದ ಮತ್ತೋರ್ವ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಮೂಲಕ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದವರಿಗೆ ಆತಂಕ ಎದುರಾಗಿದ್ದು ಪಿಎಸ್ಐ, ಕಾನ್ಸ್ ಟೇಬಲ್, ಎಫ್ ಡಿಎ, ಎಸ್ ಡಿಎ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ಅನುಮಾನ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮೇಲಿದೆ.
ನೇಮಕಾತಿ ವಿಭಾಗದಿಂದ ಕೆಳಹಂತದವರೆಗೆ ಪಾಟೀಲ್ ಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.