ಸಾಲ ನೀಡಿ ಅಧಿಕ ಬಡ್ಡಿ ವಸೂಲಿ: ಚೀನಾ ಮೂಲದ ಲೋನ್ ಆ್ಯಪ್ಗಳ 6.17 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಜಪ್ತಿ
ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಾಗಿ ಹೇಳಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಮತ್ತು ಹೆಚ್ಚಿನ ಲಾಭಾಂಶ ನೀಡುವುದಾಗಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಚೀನಾ ಆ್ಯಪ್ ಕಂಪನಿಗಳ ಹಾಗೂ ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೇಟ್ ನಲ್ಲಿದ್ದ 6.17 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಬುಧವಾರ ಜಪ್ತಿ ಮಾಡಿದೆ.
Published: 28th April 2022 01:22 PM | Last Updated: 28th April 2022 02:34 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಾಗಿ ಹೇಳಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಮತ್ತು ಹೆಚ್ಚಿನ ಲಾಭಾಂಶ ನೀಡುವುದಾಗಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಚೀನಾ ಆ್ಯಪ್ ಕಂಪನಿಗಳ ಹಾಗೂ ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೇಟ್ ನಲ್ಲಿದ್ದ 6.17 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಬುಧವಾರ ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆಗೆ ಬಳಸಲಾಗಿದ್ದ ಬ್ಯಾಂಕ್ ಖಾತೆಗಳು, ಕೆಲವು ಕಂಪನಿಗಳು, ವ್ಯಕ್ತಿಗಳ ಖಾತೆಗಳಲ್ಲಿ 6.17 ಕೋಟಿ ರೂ,ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದ ವೇಳೆ ಕೆಲ ಚೀನಾ ಪ್ರಜೆಗಳ ನೆರವಿನೊಂದಿಗೆ ತತ್ಕ್ಷಣ ಸಾಲ ಕೊಡುವ ಮೊಬೈಲ್ ಆ್ಯಪ್, ಕಂಪನಿಗಳನ್ನು ಸೃಷ್ಟಿಸಲಾಗಿದೆ. ಬೆಂಗಳೂರು ಸೇರಿ ದೇಶದ ಇತರ ಭಾಗಗಳಲ್ಲಿ ಕಡಿಮೆ ಅವಧಿಯ ಸಾಲ ನೀಡುವುದರ ಸಂಬಂಧ ಕ್ಯಾಶ್ ಮಾಸ್ಟರ್, ಕ್ರೇಜಿ ರುಪೀ, ಕ್ಯಾಶ್ ಇನ್, ರುಪೀ ಮೆನು ಸೇರಿ ವಿವಿಧ ಹೆಸರುಗಳಲ್ಲಿ ಹಲವಾರು ಆ್ಯಪ್ಗಳನ್ನು ಸೃಷ್ಟಿಸಲಾಗಿದೆ. ಆ್ಯಪ್ ಗಳ ಕಂಪನಿಗಳು ಸಾಲ ನೀಡುವುದು ಮತ್ತು ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದವು.
ಆ್ಯಪ್ ಮೂಲಕ ಐದು ಸಾವಿರದಿಂದ ರೂ.1 ಲಕ್ಷದವರೆಗೆ ಸಾಲ ಸಿಗುತ್ತಿತ್ತು. ಇವುಗಳ ವಹಿವಾಟಿಗೆ ಚೀನಾದಿಂದ ಆರ್ಥಿಕ ನೆರವು ನೀಡಲಾಗುತ್ತಿತ್ತು. ಚೀನಾ ಪ್ರಜೆಗಳ ಅನಧಿಕೃತ ವಹಿವಾಟಿಗೆ ಇಲ್ಲಿನ ಕೆಲವು ಚಾರ್ಟೆಡ್ ಅಕೌಂಟೆಂಟ್ಗಳು ಕೆವೈಸಿ ದಾಖಲೆಗಳನ್ನು ಒದಗಿಸುತ್ತಿದ್ದರು.
ಆ್ಯಪ್ಗಳ ಆಮಿಷಕ್ಕೆ ಸಿಲುಕಿ ಸಾಲ ಪಡೆದ ಬಳಿಕ ನಿಯಮಾವಳಿಗಳನ್ನು ಉಲ್ಲಂಘಿಸಿ ದುಪ್ಪಟ್ಟು ಬಡ್ಡಿ ದರ ವಸೂಲಿ ಮಾಡಲಾಗುತ್ತಿತ್ತು. ಈ ಇಡೀ ವ್ಯವಹಾರ ಚೀನಾ ಪ್ರಜೆಗಳ ನಿರ್ದೇಶನದಲ್ಲಿಯೇ ನಡೆಯುತ್ತಿತ್ತು. ಜತೆಗೆ ಎನ್ಬಿಎಫ್ಸಿ ನಿಯಮಗಳ ಉಲ್ಲಂಘನೆಯೂ ಆಗುತ್ತಿತ್ತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕಡಿಮೆ ಅವಧಿಯ ಸಾಲ ನೀಡಿ ಅಧಿಕ ಬಡ್ಡಿ ಪಡೆಯುವುದು, ಕಿರುಕುಳ ನೀಡುತ್ತಿರುವ ಸಂಬಂಧ ನೊಂದ ಕೆಲ ಸಾಲಗಾರರು ಮಾರತ್ಹಳ್ಳಿ ಹಾಗೂ ಮಹಾಲಕ್ಷ್ಮೇಪುರ ಠಾಣೆಗಳಲ್ಲಿ ದೂರು ನೀಡಿದ್ದರು.
ಪ್ರಕರಣದ ಆರಂಭಿಕ ಹಂತದಲ್ಲಿಯೇ ಅಧಿಕಾರಿಗಳಿಗೆ ಸಾಲದ ಆ್ಯಪ್ಗಳ ಹಿಂದೆ ಚೀನಾದ ಕೈವಾಡವಿದೆ ಎಂಬುದು ಸ್ಪಷ್ಟವಾಗಿತ್ತು. ಜತೆಗೆ, ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ ಎಂಬುದು ಖಚಿತವಾಗಿತ್ತು.
ಈ ನಿಟ್ಟಿನಲ್ಲಿ ಅಕ್ರಮ ಹಣ ವರ್ಗಾವಣೆ ( ಪಿಎಂಎಲ್ಎ) ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ ತನಿಖೆ ಆರಂಬಿಸಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿದ್ದ ಕಂಪನಿಗಳಿಂದ ಆಸ್ತಿಪಾಸ್ತಿ ಜಪ್ತಿ ಮಾಡಿಕೊಂಡಿದೆ.