ಆಸಿಡ್ ದಾಳಿ: ಯುವತಿಗೆ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ; ಆರೋಪಿಯ ಬಂಧನಕ್ಕೆ ಕ್ರಮ- ಗೃಹ ಸಚಿವ ಆರಗ ಜ್ಞಾನೇಂದ್ರ
ನಗರದ ಸುಂಕದಕಟ್ಟೆ ಬಳಿ 24 ವರ್ಷದ ಯುವತಿ ಮೇಲೆ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
Published: 28th April 2022 02:10 PM | Last Updated: 28th April 2022 02:36 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಸುಂಕದಕಟ್ಟೆ ಬಳಿ 24 ವರ್ಷದ ಯುವತಿ ಮೇಲೆ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಯುವತಿಯ ತಂದೆ ಇಂದು ಬೆಳಗ್ಗೆ ಬೈಕ್ ನಲ್ಲಿ ಕೆಲಸಕ್ಕೆಂದು ಕರೆದುಕೊಂಡು ಬಂದು ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ನ ಬಸ್ ನಿಲ್ದಾಣ ಬಳಿ ಬಿಟ್ಟು ಹೋಗಿದ್ದರು. ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣಗಳಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿ ಆರೋಪಿ ನಾಗೇಶ್ ದಾಳಿ ಮಾಡಿದ್ದಾನೆ. ತನ್ನನ್ನು ಪ್ರೀತಿಸು ಎಂದು ಕಳೆದ ಹಲವು ಸಮಯಗಳಿಂದ ಪೀಡಿಸುತ್ತಿದ್ದನಂತೆ.ಯುವತಿ ನಾಗೇಶ್ ನ ಪ್ರೀತಿ ನಿರಾಕರಿಸಿದ್ದಕ್ಕೆ ಈ ದಾಳಿ ನಡೆದಿದೆ.
ಯುವತಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಗೃಹ ಸಚಿವ ಹೇಳಿಕೆ: ಯುವತಿ ಮೇಲೆ ಆಸಿಡ್ ದಾಳಿ ಘಟನೆಗೆ ಸಂಬಂಧಿಸಿದಂತೆ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು ಶೀಘ್ರವೇ ಬಂಧಿಸುವ ವಿಶ್ವಾಸವಿದೆ. ಯುವತಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರೀತಿಸಲೊಪ್ಪದ ಯುವತಿ ಮೇಲೆ ಆ್ಯಸಿಡ್ ಎರಚಿ ಪಾಗಲ್ ಪ್ರೇಮಿಯ ಹುಚ್ಚಾಟ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಡಿಸಿಪಿ ಡಾ ಸಂಜೀವ್ ಪಾಟೀಲ್ ಬೆಳಗ್ಗೆ 8.30ರಿಂದ 8.45ರ ನಡುವೆ ಈ ಪೈಶಾಚಿಕ ಕೃತ್ಯ ನಡೆದಿದೆ. ಯುವತಿ ಕೆಲಸಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿರುವಾಗ ನಾಗೇಶ್ ಬಂದು ಆಸಿಡ್ ಎರಚಿ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.
ವೈದ್ಯರ ಹೇಳಿಕೆ: ಆ್ಯಸಿಡ್ ದಾಳಿಗೊಳಗಾದ ಯುವತಿಯ ದೇಹ ಶೇ.42ರಿಂದ 50ರಷ್ಟು ಸುಟ್ಟು ಹೋಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯ ಕಾರ್ತಿಕ್ ಹೇಳಿದ್ದಾರೆ.
ಆ್ಯಸಿಡ್ ಅಟ್ಯಾಕ್ ಆಗಿ ಯುವತಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಸುಟ್ಟ ಗಾಯದ ಕಂಟೆಂಟ್ ಚೆಕ್ ಮಾಡುತ್ತಿದ್ದೇವೆ. ಇನ್ನೂ ಗೊತ್ತಾಗ್ತಿಲ್ಲ, ಆಸ್ಪತ್ರೆಗೆ ಕರೆತಂದಾಗ ಆಕೆಗೆ ಬಿಪಿ ಲೋ ಇತ್ತು. ಕೂಡಲೇ ಚಿಕಿತ್ಸೆ ನೀಡಲಾಗಿದೆ. ಈಗ ಸ್ವಲ್ಪ ಇಂಪ್ರುಮೆಂಟ್ ಆಗಿದೆ. ದೇಹವು ಶೇಕಡ 42 ರಿಂದ 50 ರಷ್ಟು ಸುಟ್ಟಿದೆ. ತುರ್ತು ಚಿಕಿತ್ಸೆ ಏನು ಕೊಡಬೇಕೋ ಅದನ್ನ ನೀಡಲಾಗಿದೆ. ಅವರ ಪೋಷಕರು ಒತ್ತಾಯದ ಮೇರೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕಾತೀಕ್ ತಿಳಿಸಿದರು.
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಬಳಿಕ ನಾಗೇಶ್ ಸ್ಥಳದಿಂದ ಪರಾರಿಯಾಗಿದ್ದು. ನಾಗೇಶ್‍ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.