ಹರ್ಷ ಹತ್ಯೆ ಪ್ರಕರಣ: ಜೈಲಿನಲ್ಲಿ ಆರೋಪಿಗಳ ಹೈಡ್ರಾಮಾ
ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕಿಟಕಿಗಳಿಗೆ ತಲೆ ಜಜ್ಜಿಕೊಂಡು, ಪೆಟ್ಟು ಮಾಡಿಕೊಂಡು ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ನಡೆದಿದೆ.
Published: 29th April 2022 08:47 AM | Last Updated: 29th April 2022 01:28 PM | A+A A-

ಹರ್ಷ
ಬೆಂಗಳೂರು: ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕಿಟಕಿಗಳಿಗೆ ತಲೆ ಜಜ್ಜಿಕೊಂಡು, ಪೆಟ್ಟು ಮಾಡಿಕೊಂಡು ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ನಡೆದಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಜೈಲಿನಲ್ಲಿ ಇರಿಸಲಾಗಿದ್ದು, ಈ ಪೈಕಿ ಐವರು ಆರೋಪಿಗಳನ್ನು ಎನ್‌ಐಎ ಪೊಲೀಸರ ವಶಕ್ಕೆ ನೀಡಿ ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಮಂಗಳವಾರ (ಏ.26) ಆದೇಶಿಸಿತ್ತು.
ಇದನ್ನೂ ಓದಿ: ಹರ್ಷ ಹತ್ಯೆ ಬಳಿಕ ಪ್ರಚೋದನಾಕಾರಿ ಹೇಳಿಕೆ ಆರೋಪ: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲು
ಇದರನ್ವಯ ಎನ್‌ಐಎ ಅಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆಯಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾಗ ಆರೋಪಿಗಳು ಸುತಾರಾಂ ನಿರಾಕರಿಸಿದ್ದಾಗಿ ಮೂಲಗಳು ತಿಳಿಸಿವೆ. ರಂಜಾನ್ ಮುಗಿಯುವವರೆಗೆ ಎನ್ಐಎ ವಶಕ್ಕೆ ನೀಡಬಾರದು ಎಂದು ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದು, ವೈದ್ಯಕೀಯ ತಪಾಸಣೆಯ ನಂತರ ಐವರು ಆರೋಪಿಗಳನ್ನು ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ಇನ್ನು ಕೆಲವೇ ದಿನಗಳಲ್ಲಿ ಇನ್ನೂ ಐವರು ಆರೋಪಿಗಳನ್ನು ಎನ್ಐಎ ವಶಕ್ಕೆ ಪಡೆದುಕೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.