ಇಂಗ್ಲಿಷ್ ಭಾಷೆಗೆ ವಿಪರೀತ ಒತ್ತು ಕೊಟ್ಟು ಕಲಿಯುವ ನಾವು ಹಿಂದಿ ಕಲಿತರೆ ತಪ್ಪೇನು? ಸಚಿವ ಅಶ್ವತ್ಥನಾರಾಯಣ
‘ಕನ್ನಡವನ್ನು ನಾವು ಬೆಳೆಸಲು ಏನೇನು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದೋ ಅದನ್ನು ಮಾಡಬೇಕು. ದೇಶದಲ್ಲಿ ಇಂಗ್ಲಿಷಿಗೆ ವಿಪರೀತ ಒತ್ತು ಕೊಡುವ ನಾವು ಭಾರತೀಯ ಭಾಷೆಯಾದ ಹಿಂದಿಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ’ ಎಂದರು.
Published: 29th April 2022 08:44 AM | Last Updated: 29th April 2022 01:27 PM | A+A A-

ಅಶ್ವತ್ಥ ನಾರಾಯಣ
ಬೆಂಗಳೂರು: ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಲಿದ್ದು, ರಾಷ್ಟ್ರ ಮಟ್ಟದಲ್ಲಿ ಹಿಂದಿ ಸಂಪರ್ಕ ಭಾಷೆಯಾಗುವ ಅಗತ್ಯವಿದೆ. ನಮ್ಮ ಭಾಷೆಯನ್ನು ಗಟ್ಟಿಗೊಳಿಸಲು ನಾವು ಬೇರೆ ಭಾಷೆಯನ್ನು ದ್ವೇಷಿಸಬೇಕಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕನ್ನಡವನ್ನು ನಾವು ಬೆಳೆಸಲು ಏನೇನು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದೋ ಅದನ್ನು ಮಾಡಬೇಕು. ದೇಶದಲ್ಲಿ ಇಂಗ್ಲಿಷಿಗೆ ವಿಪರೀತ ಒತ್ತು ಕೊಡುವ ನಾವು ಭಾರತೀಯ ಭಾಷೆಯಾದ ಹಿಂದಿಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ’ ಎಂದರು.
ನಮ್ಮ ಸರಕಾರ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲು ಸಂಕಲ್ಪ ಮಾಡಿದೆ. ಬೇರಾರೂ ಇಂತಹ ಕ್ರಮವನ್ನು ಅನುಸರಿಸಿಲ್ಲ. ಇದಕ್ಕೆ ಈಗ ಅಡಚಣೆ ಎದುರಾಗಿದೆ, ನಿಜ. ಆದರೆ ಭವಿಷ್ಯದಲ್ಲಿ ಕನ್ನಡ ಕಲಿಕೆ ಅನಿವಾರ್ಯ ಆಗಲಿದೆ ಎಂದು ಅವರು ನುಡಿದರು.
ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ: ಸಚಿವ ಮುರುಗೇಶ್ ನಿರಾಣಿ
ರಾಜ್ಯದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಬೋಧನೆಯನ್ನು ಸಹ ಇಂಗ್ಲಿಷಿನ ಜತೆಗೆ ಕನ್ನಡದಲ್ಲಿ ಕೂಡ ಮಾಡುವಂತೆ ಸೂಚಿಸಲಾಗಿದೆ. ನಾವು ಕನ್ನಡವನ್ನು ಬರೀ ಹೇಳಿಕೆಗಳಲ್ಲಿ ಅಲ್ಲದೆ, ಉತ್ತಮ ಕೆಲಸಗಳ ಮೂಲಕ ಸಶಕ್ತಗೊಳಿಸಿ ಪ್ರಪಂಚಕ್ಕೇ ಸಲ್ಲುವ ಭಾಷೆಯಾಗಿಸಬೇಕು ಎಂದು ಅಭಿಪ್ರಾಯಪಟ್ಟರು.