ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ: ಸಚಿವ ಮುರುಗೇಶ್ ನಿರಾಣಿ
ಕನ್ನಡ ಭಾಷೆಯನ್ನೂ ನಾನೂ ಪ್ರೀತಿಸುತ್ತೇನೆ. ಆದರೆ, ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿಯವರು ಗುರುವಾರ ಹೇಳಿದ್ದಾರೆ.
Published: 29th April 2022 07:33 AM | Last Updated: 29th April 2022 01:23 PM | A+A A-

ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು: ಕನ್ನಡ ಭಾಷೆಯನ್ನೂ ನಾನೂ ಪ್ರೀತಿಸುತ್ತೇನೆ. ಆದರೆ, ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿಯವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಹೆಚ್ಚು ಭಾಷೆ ಕಲಿತಷ್ಟೂ ನಮಗೇ ಅನುಕೂಲ. ನಾವು ಕನ್ನಡಿಗರು, ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ. ಇಂಗ್ಲಿಷ್ ಸ್ಥಳೀಯ ಭಾಷೆಯಲ್ಲದಿದ್ದರೂ, ಹೊರ ದೇಶಗಳಲ್ಲಿ ಸಂವಹನ ನಡೆಸಲು ಇಂಗ್ಲಿಷ್ ಕಲಿಯಬೇಕಾಗಿದೆ. ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತದೆ. ನಾನೂ ಕೂಡ ಗ್ರಾಮೀಣ ಭಾಗದವನಾಗಿರುವುದರಿಂದ ಕನ್ನಡವನ್ನು ಪ್ರೀತಿಸುತ್ತೇನೆ. ಹಿಂದಿ ಭಾಷೆ ಕಲಿಯುವದರಲ್ಲಿ ಯಾವ ತಪ್ಪೂ ಇಲ್ಲ. ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ್ದಾರೆ.
ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಇದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಸದ್ಯಕ್ಕೆ ನಮಗೆ ನೀಡಿರುವ ಜವಾಬ್ದಾರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಸ್ಯಾಂಡಲ್ ವುಡ್ ವರ್ಸಸ್ ಬಾಲಿವುಡ್, ನಟ ಕಿಚ್ಚ ಸುದೀಪ್ ವರ್ಸಸ್ ನಟ ಅಜಯ್ ದೇವಗನ್ ಎಂಬ ಚರ್ಚೆಗೆ ಹಿಂದಿ ರಾಷ್ಟ್ರಭಾಷೆ ವಿಚಾರ ಎಡೆಮಾಡಿಕೊಟ್ಟಿದೆ.
ಇತ್ತೀಚಿಗೆ ಸಮಾರಂಭವೊಂದರಲ್ಲಿ ನಟ ಕಿಚ್ಚ ಸುದೀಪ್ ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದಿದ್ದರು. ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ನಮ್ಮ ಮಾತೃಭಾಷೆಯಾಗಿದೆ ಮತ್ತು ರಾಷ್ಟ್ರ ಭಾಷೆಯಾಗಿ ಯಾವಾಗಲೂ ಇರುತ್ತದೆ ಎಂದು ಟ್ವೀಟ್ ಮಾಡಿದ್ದರು. ಇದು ಇಬ್ಬರ ನಡುವೆ ಟ್ವಿಟರ್ ನಲ್ಲಿ ಸಾಕಷ್ಟು ವಾದಕ್ಕೆ ತಿರುಗಿದೆ.
ಚಿತ್ರವೊಂದರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಟ ಸುದೀಪ್, ಚಲನಚಿತ್ರಗಳ ವ್ಯಾಪ್ತಿಯ ಬಗ್ಗೆ ಪ್ಯಾನ್-ಇಂಡಿಯಾ ಸಿನಿಮಾಗಳ ಮಾತನಾಡುತ್ತಾ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಿದ್ದರು.
ಇದನ್ನೂ ಓದಿ: ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಕಿಡಿ
ಕನ್ನಡ ಚಲನಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಬಾಲಿವುಡ್ ಕೂಡ ಅನೇಕ ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಅದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತದೆ. ಆದರೆ ಅದೇ ಪ್ರಮಾಣದಲ್ಲಿ ಯಶಸ್ಸನ್ನು ಹುಡುಕಲು ಹೆಣಗಾಡುತ್ತದೆ. ಅದೇ ದಕ್ಷಿಣ ಭಾರತ ಸಿನಿರಂಗದವರು ಇಲ್ಲಿನ ಚಿತ್ರಗಳನ್ನ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಾರೆ. ಇದು ಯಶಸ್ವಿಯಾಗುತ್ತಿದೆ. ಪುಷ್ಪ ಮತ್ತು ಆರ್ ಆರ್ ಆರ್ ಇದೇ ರೀತಿ ಮಾಡಿ ಗೆದ್ದಿದ್ದಾರೆ. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ” ಎಂದಿದ್ದರು.
ಈ ಕಾಮೆಂಟ್ಗೆ ಪ್ರತಿಕ್ರಿಯಿಸಿದ ಅಜಯ್ ದೇವಗನ್, ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ “ನನ್ನ ಸಹೋದರ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲದಿದ್ದರೆ ನಿಮ್ಮ ಮಾತೃಭಾಷೆಯ ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ, ಮುಂದೆಯೂ ಆಗಿರುತ್ತದೆ. ಜನ ಗಣ ಮನ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಜಯ್ ದೇವಗನ್ ಟ್ವೀಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.