ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ದಾಳಿ: ಪೂರ್ವ ಯೋಜನೆ ಮಾಡಿ ಕುಕೃತ್ಯ ಎಸಗಿದ್ದ ಆರೋಪಿ ನಾಗೇಶ್
24 ವರ್ಷದ ಯುವತಿ ಮೇಲೆ ಎರಡು ದಿನಗಳ ಹಿಂದೆ 27 ವರ್ಷದ ಯುವಕ ನಾಗೇಶ್ ಆಸಿಡ್ ದಾಳಿ(Acid attack) ನಡೆಸುವುದಕ್ಕೆ ಮೊದಲು ಪೂರ್ವ ಯೋಜನೆ ಮಾಡಿಕೊಂಡಿದ್ದ ಎಂದು ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿದುಬಂದಿದೆ.
Published: 30th April 2022 09:44 AM | Last Updated: 30th April 2022 01:42 PM | A+A A-

ಆರೋಪಿಯನ್ನು ಶೀಘ್ರ ಬಂಧಿಸುವಂತೆ ಏಮ್ಸ್ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು: 24 ವರ್ಷದ ಯುವತಿ ಮೇಲೆ ಎರಡು ದಿನಗಳ ಹಿಂದೆ 27 ವರ್ಷದ ಯುವಕ ನಾಗೇಶ್ ಆಸಿಡ್ ದಾಳಿ(Acid attack) ನಡೆಸುವುದಕ್ಕೆ ಮೊದಲು ಪೂರ್ವ ಯೋಜನೆ ಮಾಡಿಕೊಂಡಿದ್ದ ಎಂದು ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿದುಬಂದಿದೆ.
ಆರೋಪಿ ನಾಗೇಶ್ ಇನ್ನೂ ಪತ್ತೆಯಾಗಿಲ್ಲ. ಆಸಿಡ್ ದಾಳಿ ನಡೆಸುವುದಕ್ಕೆ ಎರಡು ದಿನ ಮೊದಲು ಮಾಗಡಿ ಮುಖ್ಯ ರಸ್ತೆಯಲ್ಲಿರುವ ಆಂಧ್ರಹಳ್ಳಿ ಸಮೀಪ ಇದ್ದ ತನ್ನ ಗಾರ್ಮೆಂಟ್ ಫ್ಯಾಕ್ಟರಿಯನ್ನು ಮುಚ್ಚಿ ಅಲ್ಲಿಂದ ಖಾಲಿ ಮಾಡಿದ್ದ ಎಂದು ಗೊತ್ತಾಗಿದೆ.
ಯುವತಿ ಮೇಲೆ ಆಸಿಡ್ ಎರಚಿ ಕೋರ್ಟ್ ಮುಂದೆ ಹೋಗಿ ಶರಣಾಗುತ್ತೇನೆ ಎಂದು ಕುಟುಂಬಸ್ಥರಿಗೆ ಹೇಳಿದ್ದನಂತೆ. ಮೊನ್ನೆ ಬೆಳಗ್ಗೆ ಯುವತಿ ಮೇಲೆ ಆಸಿಡ್ ಎರಚಿ ಅವನ ಕುಟುಂಬಸ್ಥರಿಗೆ ಮೊಬೈಲ್ ಕರೆ ಮಾಡಿ ಎಲ್ಲಾದರೂ ಹೋಗಿ ಅವಿತುಕೊಳ್ಳಿ ಪೊಲೀಸರು ಬಂದು ನಿಮ್ಮಲ್ಲಿ ಮಾಹಿತಿ ಕೇಳಬಹುದು ಎಂದು ಹೇಳಿದ್ದನಂತೆ.
ಎಂಬಿಎ ಪದವೀಧರನಾಗಿದ್ದ ನಾಗೇಶ್ ತನ್ನ ಸ್ವಂತ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿದ್ದ. ಈ ಹಿಂದೆ ಆತ ಯುವತಿ ಮನೆ ಪಕ್ಕ ವಾಸಿಸುತ್ತಿದ್ದ, ಪ್ರೀತಿ ಮಾಡು ಎಂದು ಪೀಡಿಸುತ್ತಿದ್ದಾಗ ಯುವತಿ ಮನೆಯವರು ಇಲ್ಲಿಂದ ಮನೆ ಖಾಲಿ ಮಾಡು ಎಂದು ಒತ್ತಾಯಿಸಿದರಂತೆ. ಹೀಗಾಗಿ ಅಲ್ಲಿಂದ ಮನೆ ಖಾಲಿ ಮಾಡಿದ್ದ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಇದೀಗ ಮೂರು ತಂಡಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ: ಆಸಿಡ್ ದಾಳಿ: ಯುವತಿಗೆ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ; ಆರೋಪಿಯ ಬಂಧನಕ್ಕೆ ಕ್ರಮ- ಗೃಹ ಸಚಿವ ಆರಗ ಜ್ಞಾನೇಂದ್ರ
ಆರೋಪಿ ನಾಗೇಶ್ ಕರೆ ಮಾಡಿರುವ ವಿವರಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಆತ ಸ್ನೇಹಿತರು, ಬಂಧುಗಳ ಮನೆಯಲ್ಲಿ ಅವಿತು ಕುಳಿತಿರಬಹುದೇ ಎಂದು ಹುಡುಕಾಟ ನಡೆಸುತ್ತಿದ್ದಾರೆ. ನಾಗೇಶ್ ಯುವತಿ ಮೇಲೆ ಆಸಿಡ್ ಎರಚಿ ಕಾನೂನಿನ ಸಹಾಯಕ್ಕೆ ಸಿಟಿ ಸಿವಿಲ್ ಕೋರ್ಟ್ ಗೆ ಹೋಗಿದ್ದ ಎಂದು ಹೇಳಲಾಗುತ್ತಿದೆ. ಅಲ್ಲಿ ಯಾವುದೇ ಅಡ್ವೊಕೇಟ್ ಗಳು ಸಿಗದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ನಾಗೇಶ್ ಯಾವುದಾದರೂ ಎಟಿಎಂ ಕಿಯೋಸ್ಕ್ನಿಂದ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದಾನೆಯೇ ಎಂದು ನೋಡಲು ಪೊಲೀಸ್ ಅಧಿಕಾರಿಗಳು ಆತನ ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ಇರಿಸಿದ್ದಾರೆ. ಒಂದು ತಂಡದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್, ಇನ್ನೊಂದು ತಂಡ ಬ್ಯಾಡರಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮೂರನೇ ತಂಡದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಸ್ಕ್ವಾಡ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಸಿಡ್ ಎಸೆದ ಬಳಿಕ ಕೋರ್ಟ್ ಆವರಣದವರೆಗೆ ಆಟೋದಲ್ಲಿ ಹೋಗಿದ್ದಾನೆ. ಆಸಿಡ್ ದಾಳಿಗೊಳಗಾದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.